ಬೆಂಗಳೂರು: ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ 48 ವರ್ಷದ ವ್ಯಕ್ತಿ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ವಿಚಾರಣೆ ರದ್ದುಗೊಳಿಸಲು ನಿರಾಕರಿಸಿದ ಹೈಕೋರ್ಟ್, ಇದು ಕ್ಷಮಿಸಲು ಅರ್ಹವಲ್ಲದ ಪ್ರಕರಣ ಎಂದು ಹೇಳಿದೆ.
ಕ್ರಿಮಿನಲ್ ಪ್ರಕರಣದ ವಿಚಾರಣೆ ರದ್ದು ಕೋರಿ ತುಮಕೂರು ಜಿಲ್ಲೆಯ ಕೃಷ್ಣಪ್ಪ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ವಾದ ಮಂಡಿಸಿ, ಅರ್ಜಿದಾರರು ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಇದು ಗಂಭೀರ ಆರೋಪ. ಹೀಗಾಗಿ ಪ್ರಕರಣವನ್ನು ರದ್ದುಗೊಳಿಸದಂತೆ ಮನವಿ ಮಾಡಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ಅರ್ಜಿದಾರರು ವಿವೇಚನೆರಹಿತವಾಗಿ ವರ್ತಿಸಿ ಕೃತ್ಯ ಎಸಗಿದ್ದಾರೆ. ಇದು ಕ್ಷಮಿಸಲು ಅರ್ಹವಲ್ಲದ ಪ್ರಕರಣ. ಅಲ್ಲದೆ, ಮಗುವಿನ ಪಾಟಿ-ಸವಾಲಿನಲ್ಲಿ ತಪ್ಪಾದ ಉತ್ತರಗಳನ್ನು ನೀಡಿದ್ದಾರೆ ಎಂಬ ಆಧಾರದ ಮೇಲೆ ಅರ್ಜಿದಾರರು ವಿಚಾರಣೆ ರದ್ದುಗೊಳಿಸಲು ಹೇಗೆ ಕೋರುತ್ತಾರೆ ಎಂಬುದು ಅರ್ಥವಾಗದ ಸಂಗತಿ ಎಂದು ಹೇಳಿದ ಪೀಠ, ಮುಂದಿನ ಮೂರು ತಿಂಗಳಲ್ಲಿ ವಿಚಾರಣೆ ಪೂರ್ಣಗೊಳಿಸಬೇಕು ಎಂದು ನಿರ್ದೇಶನ ನೀಡಿದೆ.