ಬೆಂಗಳೂರು: ಇ-ಸ್ವತ್ತು ಮಾಡಿಕೊಡಲು ಲಂಚಕ್ಕೆ ಬೇಡಿಕೆ ಪಡೆದಿದ್ದ ಪ್ರಕರಣದಲ್ಲಿ ಆರೋಪ ಸಾಬೀತಾದ ಕಾರಣ ಪಂಚಾಯತಿ ಅಭಿವೃದ್ಧಿ ಅಧಿಕಾರಿಯನ್ನು ರಾಜ್ಯ ಸರ್ಕಾರ ಕಡ್ಡಾಯ ನಿವೃತ್ತಿ ನೀಡಿದೆ.
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಚನ್ನೇಪುರ ಗ್ರಾಮದ ಪಿಡಿಒ ಹನುಮಂತಪ್ಪ ಹಂಚಿನಮನೆ ಕಡ್ಡಾಯ ನಿವೃತ್ತಿಗೆ ಒಳಗಾದವರು. ಮಂಗಳಬಾಯಿ ಎಂಬುವವರಿಗೆ ಮನೆ ಖರೀದಿಸಲು ಇ-ಖಾತಾ ಮಾಡಿಕೊಡಲು ಪಿಡಿಒ 2,000 ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಅದರಂತೆ ರಾಜ್ಯ ಸರ್ಕಾರ ಜುಲೈ 31, 2023 ರಂದು ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957 ರ ನಿಯಮ 14 (ಎ) ಅಡಿಯಲ್ಲಿ ಅವರ ವಿರುದ್ಧದ ತನಿಖೆಯನ್ನು ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ ವೀರಪ್ಪ ಅವರಿಗೆ ವಹಿಸಿತು. ಫೆಬ್ರವರಿ 18 ರಂದು ಉಪ ಲೋಕಾಯುಕ್ತರು, ಕರ್ನಾಟಕ ನಾಗರಿಕ ಸೇವಾ (ನಡವಳಿಕೆ) ನಿಯಮಗಳು, 1966 ರ ನಿಯಮ 3 (1) (i), (ii) ಮತ್ತು( iii) ಅಡಿಯಲ್ಲಿ ಅನುಚಿತವಾಗಿ ವರ್ತಿಸಿದ್ದರಿಂದ ಅವರಿಗೆ ಕಡ್ಡಾಯ ನಿವೃತ್ತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.
ಶಿಫಾರಸನ್ನು ಅಂಗೀಕರಿಸಿದ ರಾಜ್ಯ ಸರ್ಕಾರವು ಮಾರ್ಚ್ 10 ರಂದು ಹನುಮಂತಪ್ಪ ಹಂಚಿನಮನೆ ಅವರಿಗೆ ಶೋಕಾಸ್ ನೋಟಿಸ್ ನೀಡಿತು. ಪಿಡಿಒ ಹನುಮಂತಪ್ಪ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದರು, ವಿಚಾರಣಾ ವರದಿಯನ್ನು ಪರಿಶೀಲಿಸಿದ ರಾಜ್ಯ ಸರ್ಕಾರ ಆರೋಪ ಸಾಬೀತಾದ ಕಾರಣ ಪಿಓಡಿಗೆ ಕಡ್ಡಾಯ ನಿವೃತ್ತಿ ಘೋಷಿಸಿ ಆದೇಶಿಸಿದೆ.