ತುಮಕೂರು: ಟೋಯಿಂಗ್ ಮಾಡಿ ಒಯ್ದಿದ್ದ
ಕಾರು ಹಿಂದಿರುಗಿಸಲು ₹40 ಸಾವಿರ ಲಂಚ ಪಡೆದ ಆರೋಪದ ಮೇಲೆ ತುಮಕೂರು ಗ್ರಾಮಾಂತರ ಠಾಣೆ ಸಬ್ ಇನ್‌ಸ್ಪೆಕ್ಟರ್ ಎಸ್.ಎಸ್. ಚೇತನ್ ಕುಮಾರ್ ಅವರನ್ನು ಕುಮಾರ್ ಲೋಕಾಯುಕ್ತ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಚೇತನ್ ಪರ ಲಂಚದ ಹಣ ಪಡೆದಿದ್ದ ಜಾಸ್ ಟೋಲ್ ಸಮೀಪದ ಹೋಟೆಲ್ ಕ್ಯಾಷಿಯರ್ ಸಫ್ತರ್ ಅಲಿಖಾನ್ ಅವರನ್ನು ಬಂಧಿಸಲಾಗಿದೆ. ಇಬ್ಬರನ್ನೂ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಪ್ರಕರಣ ವಿವರ: ಬೆಂಗಳೂರಿನ ನಾಗದೇವನಹಳ್ಳಿಯ
ಎಸ್.ಕೆ.ನಾಗೇಶ್ ಅವರು ಜ. 17ರಂದು ನಗರದ ಹೊರವಲಯದ ಕೆಸರುಮಡು ಗ್ರಾಮದ ದರ್ಗಾ ಸರ್ಕಲ್‌ನಲ್ಲಿ ಕಾರು ನಿಲ್ಲಿಸಿದ್ದರು. ಆಗ ಸ್ಥಳಕ್ಕೆ ಪಿಎಸ್‌ಐ ಚೇತನ್ ಟೋಯಿಂಗ್ ಮಾಡಿ ಕಾರು ತೆಗೆದುಕೊಂಡು ಹೋಗಿ ಠಾಣೆ ಬಳಿ ನಿಲ್ಲಿಸಿದ್ದರು.
ಠಾಣೆಗೆ ಬಂದು ಕಾರು ಬಿಡುಗಡೆಗೆ ಕೋರಿದಾಗ, ‘ನೀವು ಗಾಂಜಾ ಸೇವನೆ ಮಾಡಿದ್ದೀರಿ. ಪ್ರಕರಣ ದಾಖಲಿಸಲಾಗುವುದು. ನ್ಯಾಯಾಲಯದಲ್ಲಿ ಕಾರು ಬಿಡಿಸಿಕೊಳ್ಳಿ’ ಎಂದಿದ್ದಾರೆ. ನಂತರ ₹5 ಲಕ್ಷ ಲಂಚಕ್ಕೆ ಒತ್ತಾಯಿಸಿದ್ದಾರೆ. ಅಂತಿಮವಾಗಿ ₹40 ಸಾವಿರ ನೀಡಿ ಕಾರು ತೆಗೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ. ಈ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಪಿಎಸ್‌ಐ ಚೇತನ್ ಸೂಚನೆಯಂತೆ ಶುಕ್ರವಾರ ರಾತ್ರಿ ಜಾಸ್ ಟೋಲ್ ಬಳಿ ಇರುವ ‘ನಮಸ್ತೆ ತುಮಕೂರು’ ಹೋಟೆಲ್ ಕ್ಯಾಷಿಯರ್ ಸಫರ್ ಅಲಿಖಾನ್ ಅವರಿಗೆ ನಾಗೇಶ್ ₹40 ಸಾವಿರ ನೀಡಿದ್ದರು. ಆಗ ಲೋಕಾಯುಕ್ತ ಪೊಲೀಸರು ಹಣದ ಸಹಿತ ಅಲಿಖಾನ್ ನನ್ನು ವಶಕ್ಕೆ ಪಡೆದ್ದಾರೆ.