ಬೆಂಗಳೂರು: ಸ್ಪಷ್ಟ ಆಧಾರ ಅಥವಾ ನಿರ್ದಿಷ್ಟ ಸಾಕ್ಷ್ಯಗಳಿಲ್ಲದೆ ಗಂಡನ ಪಾಲಕರು ಹಾಗೂ ದೂರದ ಸಂಬಂಧಿಕರನ್ನು ವರದಕ್ಷಿಣೆ ಕಿರುಕುಳ ಪ್ರಕರಣಗಳಲ್ಲಿ ಸಿಲುಕಿಸುವುದು ಕಾನೂನಿನ ಸ್ಪಷ್ಟ ದುರುಪಯೋಗ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ಮಹಿಳೆಯೊಬ್ಬರು ತಮ್ಮ ಅತ್ತೆ, ಮಾವನ ಸಹೋದರ ಹಾಗೂ ಇಬ್ಬರು ಭಾವಂದಿರ ವಿರುದ್ಧ ಬೆಂಗಳೂರಿನ ಆಡುಗೋಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದ ಪ್ರಕರಣವನ್ನು ರದ್ದುಗೊಳಿಸಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಮಹತ್ವದ ಆದೇಶ ನೀಡಿದೆ. ಆದರೆ, ಪ್ರಕರಣದ ಪ್ರಮುಖ ಆರೋಪಿಯಾಗಿರುವ ಪತಿಯ ವಿರುದ್ಧದ ವಿಚಾರಣೆ ಮುಂದುವರಿಯಲಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ದೂರಿನಲ್ಲಿರುವ ಬಹುತೇಕ ಮುಖ್ಯ ಆರೋಪಗಳು ಪತಿಯ ವಿರುದ್ಧವೇ ಇವೆ. ಅತ್ತೆ ಮತ್ತು ಇತರ ಸಂಬಂಧಿಕರ ಮೇಲಿನ ಆರೋಪಗಳು ತೀರಾ ಸಾಮಾನ್ಯ, ಅಸ್ಪಷ್ಟ ಹಾಗೂ ಆಧಾರರಹಿತವಾಗಿವೆ.
ಅಡುಗೆ ಮನೆಯ ಪದಾರ್ಥಗಳ ಪ್ರಮಾಣ ನಿಗದಿಪಡಿಸುವುದು, ಉಪಾಹಾರ ನೀಡುವುದು ಅಥವಾ ಬ್ಯೂಟಿ ಪ್ರಾಡಕ್ಟ್‌ಗಳ ಬಳಕೆ ವಿಚಾರಗಳು ಕ್ರಿಮಿನಲ್ ಅಪರಾಧದ ವ್ಯಾಪ್ತಿಗೆ ಬರುವುದಿಲ್ಲ.
ಪತಿ-ಪತ್ನಿ ನಡುವಿನ ಭಿನ್ನಾಭಿಪ್ರಾಯ ವಿಕೋಪಕ್ಕೆ ಹೋದಾಗ ಇಡೀ ಕುಟುಂಬ ಸದಸ್ಯರನ್ನು ಆರೋಪಿಗಳನ್ನಾಗಿ ಮಾಡುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚಾಗುತ್ತಿದೆ. ಇಂತಹ ಸಾಮಾನ್ಯ ಆರೋಪಗಳ ಮೇಲೆ ವಿಚಾರಣೆಗೆ ಅನುಮತಿ ನೀಡುವುದು ಕಾನೂನಿನ ಉಲ್ಲಂಘನೆಯಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ: 2024ರ ಮೇ ತಿಂಗಳಲ್ಲಿ ಈ ದಂಪತಿಯ ವಿವಾಹ ನಡೆದಿತ್ತು. ಮದುವೆಯಾದ ಕೆಲವೇ ತಿಂಗಳಲ್ಲಿ ಮನಸ್ತಾಪ ಉಂಟಾಗಿ ಇಬ್ಬರೂ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ್ದರು. 2025ರ ಏಪ್ರಿಲ್ 5ರಂದು ದೂರು ದಾಖಲಿಸಿದ್ದ ಮಹಿಳೆ, ವರದಕ್ಷಿಣೆ ಮತ್ತು ಮಾನಸಿಕ-ದೈಹಿಕ ಕಿರುಕುಳದ ಆರೋಪ ಹೊರಿಸಿದ್ದರು.
ಪತಿಗೆ ಪೌಷ್ಟಿಕ ಆಹಾರ ನೀಡಿ ನನಗೆ ನೀಡುತ್ತಿರಲಿಲ್ಲ. ಪತಿಯ ಊಟ ಮುಗಿಯುವವರೆಗೆ ಕಾಯಿಸುತ್ತಿದ್ದರು. ‘ಪತಿ ಬಳಸುವ ಶ್ಯಾಂಪೂವನ್ನೆ ನಾನುಬಳಸುವಂತೆ ಪೀಡಿಸುತ್ತಿದ್ದ. ಇದರಿಂದ ಮಾನಸಿಕ ಒತ್ತಡ ಉಂಟಾಗಿ ತಲೆಗೂದಲು ಉದುರಿ ನೆತ್ತಿ ಕಾಣಿಸುವಂತಾಗಿದೆ” ಎಂದು ಮಹಿಳೆ ಖುದ್ದಾಗಿ ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ್ದರು. ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಪೀಠ, ಸಂಬಂಧಿಕರ ವಿರುದ್ಧದ ಆರೋಪಗಳಲ್ಲಿ ತಥ್ಯವಿಲ್ಲವೆಂದು ಪರಿಗಣಿಸಿ ಅವರ ಮೇಲಿನ ಪ್ರಕರಣವನ್ನು ವಜಾಗೊಳಿಸಿದೆ.