ಸುದ್ದಿ

ಖಾಸಗಿ ಶಾಲೆಗಳು ಡೊನೇಷನ್ ಪಡೆದರೆ ಡೊನೇಷನ್ ಶುಲ್ಕದ 10 ಪಟ್ಟು ದಂಡ; ಶಿಕ್ಷಣ ಇಲಾಖೆ ಸುತ್ತೋಲೆ

Share It

​ಬೆಂಗಳೂರು: ಖಾಸಗಿ ಶಾಲೆಗಳ ಅತಿಯಾದ ಶುಲ್ಕ ಸಂಗ್ರಹ ಹಾಗೂ ಡೊನೇಷನ್ ದಂದೆಗೆ ಬ್ರೇಕ್ ಹಾಕಲು ಶಾಲಾ ಶಿಕ್ಷಣ ಇಲಾಖೆ ಮುಂದಾಗಿದ್ದು, ನಿಯಮ ಮೀರಿ ಕ್ಯಾಪಿಟೇಷನ್ ಶುಲ್ಕ ಪಡೆದರೆ ಆ ಮೊತ್ತದ 10 ಪಟ್ಟು ದಂಡ ವಿಧಿಸುವುದಾಗಿ ಕಟ್ಟುನಿಟ್ಟಿನ ಸುತ್ತೋಲೆ ಹೊರಡಿಸಿದೆ.

​೨೦೨೫-೨೬ನೇ ಶೈಕ್ಷಣಿಕ ಸಾಲಿನ ಮಕ್ಕಳ ದಾಖಲಾತಿ ಮತ್ತು ಶುಲ್ಕ ಪ್ರಕ್ರಿಯೆ ಪೂರ್ಣಗೊಂಡ ಬಳಿಕ, ಶಾಲೆಗಳು ನಿಗದಿಪಡಿಸಿದ ಅಂತಿಮ ಶುಲ್ಕದ ವಿವರಗಳನ್ನು ತಮ್ಮ ಅಧಿಕೃತ ವೆಬ್‌ಸೈಟ್ ಹಾಗೂ ಶಿಕ್ಷಣ ಇಲಾಖೆಯ ಪೋರ್ಟಲ್‌ನಲ್ಲಿ ಕಡ್ಡಾಯವಾಗಿ ಪ್ರಕಟಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತ ವಿಕಾಸ್ ಕಿಶೋರ್ ಸುರತ್ಕರ್ ಸುತ್ತೋಲೆ ಹೊರಡಿಸಿದ್ದಾರೆ.

ಶಿಕ್ಷಣ ​ಇಲಾಖೆ ಸುತ್ತೋಲೆಯ ಪ್ರಮುಖ ಸೂಚನೆಗಳು:

​ ಇಲಾಖೆ ಹೊರಡಿಸಿರುವ ಸುತ್ತೋಲೆ ಪ್ರಕಾರ ಖಾಸಗಿ ಶಾಲೆಗಳು ದಾಖಲಾತಿ ವೇಳೆ ಪೋಷಕರಿಂದ ಕಾನೂನುಬಾಹಿರವಾಗಿ ಡೊನೇಷನ್ ಅಥವಾ ಕ್ಯಾಪಿಟೇಷನ್ ಶುಲ್ಕ ವಸೂಲಿ ಮಾಡಿದ್ದು ಸಾಬೀತಾದರೆ, ಪಡೆದ ಶುಲ್ಕಕ್ಕಿಂತ 10 ಪಟ್ಟು ಹೆಚ್ಚು ದಂಡ ವಿಧಿಸಲಾಗುತ್ತದೆ.

​ ಪ್ರವೇಶಾತಿ ನೀಡುವ ಮುನ್ನ ಮಕ್ಕಳಿಗೆ ಅಥವಾ ಪೋಷಕರಿಗೆ ಯಾವುದೇ ರೀತಿಯ ಸಂದರ್ಶನ, ಬುದ್ಧಿವಂತಿಕೆ ಪರೀಕ್ಷೆ ಇಲ್ಲವೇ ಅರ್ಹತಾ ಪರೀಕ್ಷೆ ನಡೆಸುವಂತಿಲ್ಲ.

​ ಪ್ರವೇಶ ಪರೀಕ್ಷೆ ನಡೆಸುವ ಶಾಲೆಗಳಿಗೆ ಮೊದಲ ತಪ್ಪಿಗೆ ₹೨೫,೦೦೦ ದಂಡ ಹಾಗೂ ತಪ್ಪು ಪುನರಾವರ್ತನೆಯಾದರೆ ಪ್ರತಿ ಬಾರಿಗೆ ₹೫೦,೦೦೦ ದಂಡ ವಿಧಿಸಲು ಜಿಲ್ಲಾ ಉಪನಿರ್ದೇಶಕರು (DDPI) ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ (BEO) ಅಧಿಕಾರ ನೀಡಲಾಗಿದೆ.

​ಇಲಾಖೆಯ ಕಾಯ್ದೆ ಹಾಗೂ ನಿಯಮಾವಳಿಗಳ ಪ್ರಕಾರ ಪೋಷಕರ ವಿದ್ಯಾರ್ಹತೆ ಅಥವಾ ಆರ್ಥಿಕ ಹಿನ್ನೆಲೆಯನ್ನು ಆಧರಿಸಿ ಮಗುವಿಗೆ ಪ್ರವೇಶಾತಿ ನಿರಾಕರಿಸುವುದು ಅಪರಾಧವಾಗಿದೆ. ಈ ಹೊಸ ನಿಯಮದಿಂದಾಗಿ ಪೋಷಕರಿಗೆ ಖಾಸಗಿ ಶಾಲೆಗಳ ಕಿರುಕುಳ ತಪ್ಪಲಿದ್ದು, ಪಾರದರ್ಶಕತೆಗೆ ಹಾದಿಯಾದಂತಾಗಿದೆ.


Share It

You cannot copy content of this page