ನೆಲಮಂಗಲ: ಕಸ ತೆರವುಗೊಳಿಸುವ ವಿಚಾರವಾಗಿ ಪೌರ ಕಾರ್ಮಿಕರ ಜೊತೆ ಮಹಿಳೆಯೊಬ್ಬಳು ಗಲಾಟೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ನೆಲಮಂಗಲದ ವೀವರ್ಸ್ ಕಾಲೋನಿಯಲ್ಲಿ ನಡೆದಿದೆ. ಮಹಿಳೆಯ ಈ ನಡವಳಿಕೆಯಿಂದ ಆಕ್ರೋಶಗೊಂಡ ಪೌರ ಕಾರ್ಮಿಕರು, ಆಕೆಯ ಮನೆ ಮುಂದೆಯೇ ಒಂದು ಲೋಡ್ ಕಸ ಸುರಿದು ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ.
ಘಟನೆಯ ವಿವರ:
ನೆಲಮಂಗಲ ಪುರಸಭೆಯ ವಾರ್ಡ್ ನಂಬರ್ 14ರ ವ್ಯಾಪ್ತಿಯಲ್ಲಿ ಪೌರ ಕಾರ್ಮಿಕ ಅಶೋಕ್ ಕುಮಾರ್ ಅವರು ರಾಜಕಾಲುವೆ ಬಳಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ ಸ್ಥಳೀಯ ನಿವಾಸಿ ಪುಟ್ಟಮ್ಮ ಎಂಬ ಮಹಿಳೆ, “ಮೊದಲು ನಮ್ಮ ಮನೆ ಮುಂದೆ ಬಿದ್ದಿರುವ ಕಸವನ್ನು ಕ್ಲೀನ್ ಮಾಡಿ” ಎಂದು ಪಟ್ಟು ಹಿಡಿದಿದ್ದಾರೆ.
ಈ ವಿಚಾರವಾಗಿ ಪೌರ ಕಾರ್ಮಿಕ ಹಾಗೂ ಮಹಿಳೆಯ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಜಗಳ ವಿಕೋಪಕ್ಕೆ ಹೋದಂತೆ ಮಹಿಳೆಯು ಪೌರ ಕಾರ್ಮಿಕನಿಗೆ ಅಸಭ್ಯ ಭಾಷೆಯಲ್ಲಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಮಹಿಳೆಯ ನಿಂದನೆಯಿಂದ ಕೆರಳಿದ ಪೌರ ಕಾರ್ಮಿಕರು, ತಕ್ಷಣವೇ ಟ್ರ್ಯಾಕ್ಟರ್ ಮೂಲಕ ತಂದಿದ್ದ ಒಂದು ಲೋಡ್ ಕಸವನ್ನು ಆಕೆಯ ಮನೆಯಂಗಳದಲ್ಲೇ ಸುರಿದು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಈ ಘಟನೆ ಸ್ಥಳೀಯವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.