ಸುದ್ದಿ

ಗಣೇಶ ಮೂರ್ತಿ ವಿಸರ್ಜನೆಗೆ ಅವಕಾಶ ಹಿನ್ನೆಲೆ; ಹಾಸನ ಎಸ್‌ಪಿಗೆ ಜಿಲ್ಲಾಧಿಕಾರಿ ನೋಟಿಸ್

Share It

​ಹಾಸನ: ನಗರದ ಐತಿಹಾಸಿಕ ನೀರು ಬಾಗಿಲು ಅಂಜನೇಯಸ್ವಾಮಿ ದೇವಸ್ಥಾನದ ಪಕ್ಕದಲ್ಲಿರುವ ದೇವಿಗೆರೆಯಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿ ಗೌರಿ-ಗಣೇಶ ಮೂರ್ತಿಗಳ ವಿಸರ್ಜನೆಗೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಶುಭಾನ್ವಿತಾ ಅವರಿಗೆ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರು ನೋಟಿಸ್ ಜಾರಿ ಮಾಡಿದ್ದಾರೆ.

​ದೇವಿಗೆರೆ ಕಲ್ಯಾಣಿಯ ನೀರು ಬಣ್ಣ ಹಾಗೂ ರಾಸಾಯನಿಕ ತ್ಯಾಜ್ಯಗಳಿಂದ ಕಲುಷಿತಗೊಳ್ಳುವುದನ್ನು ತಡೆಯುವ ಉದ್ದೇಶದಿಂದ ಜಿಲ್ಲಾಧಿಕಾರಿಗಳು ಇಲ್ಲಿ ಮೂರ್ತಿ ವಿಸರ್ಜನೆಯನ್ನು ಸಂಪೂರ್ಣವಾಗಿ ನಿಷೇಧಿಸಿದ್ದರು. ಜೊತೆಗೆ, ಈ ಆದೇಶ ಉಲ್ಲಂಘಿಸುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಪೊಲೀಸ್ ಇಲಾಖೆಗೆ ಸ್ಪಷ್ಟ ಸೂಚನೆಯನ್ನೂ ನೀಡಿದ್ದರು.

​ಆದಾಗ್ಯೂ, ಶನಿವಾರ (ಅ. 3) ನಿಯಮ ಉಲ್ಲಂಘಿಸಿ ಪೆಂಡಾಲ್ ಗಣಪತಿ ಹಾಗೂ ಗೌರಿ ಮೂರ್ತಿಗಳನ್ನು ದೇವಿಗೆರೆಯಲ್ಲಿ ವಿಸರ್ಜಿಸಲಾಗಿದೆ. ಕರ್ತವ್ಯಲೋಪ ಹಾಗೂ ನಿರ್ಲಕ್ಷ್ಯ ವಹಿಸಿದ ಹಿನ್ನೆಲೆಯಲ್ಲಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಿರುವ ಜಿಲ್ಲಾಧಿಕಾರಿಗಳು, ಎಸ್‌ಪಿ ಅವರು ನಿಗದಿತ ಕಾಲಮಿತಿಯೊಳಗೆ ಖುದ್ದು ಹಾಜರಾಗಿ ಲಿಖಿತ ಸಮಜಾಯಿಷಿ ನೀಡಬೇಕು ಎಂದು ಸೂಚಿಸಿದ್ದಾರೆ. ಸೂಕ್ತ ಉತ್ತರ ನೀಡದಿದ್ದಲ್ಲಿ ಶಿಸ್ತು ಕ್ರಮಕ್ಕಾಗಿ ಸಕ್ಷಮ ಪ್ರಾಧಿಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ನೋಟಿಸ್‌ನಲ್ಲಿ ತಿಳಿಸಿದ್ದಾರೆ.


Share It

You cannot copy content of this page