ಸುದ್ದಿ

ಸಿಎಂಆರ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅದ್ಧೂರಿ ರಾಜ್ಯೋತ್ಸವ: ಕನ್ನಡಿಗರ ನಾಡು-ನುಡಿ ಸಂಭ್ರಮಾಚರಣೆ

Share It

ಬೆಂಗಳೂರು: ನಗರದ ಐಟಿ ಪಾಕ್೯ ರಸ್ತೆಯಲ್ಲಿರುವ ಸಿಎಂಆರ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ೭೧ನೇ ಕರ್ನಾಟಕ ರಾಜ್ಯೋತ್ಸವವನ್ನು ಅತ್ಯಂತ ಸಡಗರ ಮತ್ತು ವೈಭವಯುತವಾಗಿ ಆಚರಿಸಲಾಯಿತು.

​ಸಿಎಂಆರ್ ಐಟಿ ಪ್ರಾಂಗಣದಲ್ಲಿ ‘ಸಂಸ್ಕೃತಿ ಕನ್ನಡ ಸಂಘ’ ಆಯೋಜಿಸಿದ್ದ ೭೧ನೇ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಕೆಂಪು ಮತ್ತು ಅರಶಿಣ ಬಣ್ಣದ ಉಡುಪುಗಳನ್ನು ತೊಟ್ಟು ಕರುನಾಡಿನ ಸಂಸ್ಕೃತಿಯ ಸೊಬಗನ್ನು ಕಂಪಿಸಿದರು.

​ಕೆಂಪು ಮತ್ತು ಹಳದಿ ಬಣ್ಣದ ಹೂಗಳಿಂದ ಕಲಾತ್ಮಕವಾಗಿ ಅಲಂಕರಿಸಲಾಗಿದ್ದ ನಾಡದೇವಿ ಭುವನೇಶ್ವರಿ ಭಾವಚಿತ್ರಕ್ಕೆ ಉಪ ಪ್ರಾಂಶುಪಾಲರಾದ ಡಾ. ಬಿ. ನರಸಿಂಹ ಮೂರ್ತಿ ಅವರು ಪುಷ್ಪಾರ್ಚನೆಗೈದು, ಧ್ವಜಾರೋಹಣ ನೆರವೇರಿಸಿದರು.

​ರಾಜ್ಯೋತ್ಸವ ಕುರಿತು ಮಾತನಾಡಿದ ಉಪ ಪ್ರಾಂಶುಪಾಲ ಡಾ. ಬಿ. ನರಸಿಂಹ ಮೂರ್ತಿ ಅವರು, “ಕನ್ನಡ ಕೇವಲ ಒಂದು ಪ್ರಾಚೀನ ಭಾಷೆಯಷ್ಟೇ ಅಲ್ಲ, ಅದು ಅತ್ಯಂತ ಶ್ರೀಮಂತ ಮತ್ತು ಸೃಜನಶೀಲ ಸಾಹಿತ್ಯದಿಂದ ತುಂಬಿರುವ ಜೀವಂತ ಭಾಷೆ. ಇಂತಹ ಸಶಕ್ತ ಭಾಷೆಯನ್ನು ಇಂದಿನ ಯುವ ಜನಾಂಗ ಉಳಿಸಿ, ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಎಲ್ಲರನ್ನೂ ಪ್ರೀತಿಯಿಂದ ಸ್ವಾಗತಿಸುವ ಮತ್ತು ಒಳಗೊಳ್ಳುವ ಉದಾತ್ತ ಗುಣ ಕನ್ನಡದ ಮಣ್ಣಿಗಿದೆ. ಈ ನಾಡಿನಲ್ಲಿ ಬದುಕುವ ಪ್ರತಿಯೊಬ್ಬರೂ ಕನ್ನಡ ಭಾಷೆಯನ್ನು ಗೌರವಿಸಿ, ಕನ್ನಡತನವನ್ನು ತಮ್ಮ ದೈನಂದಿನ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು” ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕರ್ನಾಟಕದ ನಾಡು, ನುಡಿ, ಇತಿಹಾಸ ಹಾಗೂ ಸಂಸ್ಕೃತಿಯನ್ನು ಬಿಂಬಿಸುವ ನೃತ್ಯ, ಹಾಡು,ಕವಿತೆಗಳನ್ನು ಪ್ರಸ್ತುತಪಡಿಸುವ ಮೂಲಕ ರಾಜ್ಯೋತ್ಸವಕ್ಕೆ ವಿಶೇಷ ಮೆರುಗು ತುಂಬಿದರು.

​ಕಾರ್ಯಕ್ರಮದಲ್ಲಿ ಡೀನ್ ಗಳು, ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದು ಕನ್ನಡತನಕ್ಕೆ ಸಾಕ್ಷಿಯಾದರು.


Share It

You cannot copy content of this page