ಬೆಂಗಳೂರು: ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಪಡೆದಿದ್ದರೂ ವ್ಯಕ್ತಿಯನ್ನು ಅಕ್ರಮವಾಗಿ ಬಂಧಿಸಿ, ಅವರ ಹೃದ್ರೋಗಿ ತಂದೆಗೆ ಕಿರುಕುಳ ನೀಡಿದ್ದ ವಿದ್ಯಾರಣ್ಯಪುರ ಪೊಲೀಸ್ ಠಾಣೆಯ ಅಂದಿನ ಇನ್ಸ್‌ಪೆಕ್ಟರ್‌ಗೆ ಹೈಕೋರ್ಟ್ ಭಾರೀ ದಂಡ ವಿಧಿಸಿದೆ. ಸಂತ್ರಸ್ತರಿಗೆ ಒಟ್ಟು ₹9 ಲಕ್ಷ ಪರಿಹಾರ ಪಾವತಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.
ವಿದ್ಯಾರಣ್ಯಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ತಮ್ಮನ್ನು ಬಂಧಿಸಿದ್ದನ್ನು ಅಕ್ರಮವೆಂದು ಘೋಷಿಸಬೇಕು ಮತ್ತು ಪರಿಹಾರ ಪಾವತಿಸಲು ನಗರ ಪೊಲೀಸ್ ಆಯುಕ್ತರಿಗೆ ನಿರ್ದೇಶಿಸಬೇಕು ಎಂದು ಕೋರಿ ವಿದ್ಯಾರಣ್ಯಪುರ ನಿವಾಸಿ ಪಿ. ಜವರಶೆಟ್ಟಿ ಹಾಗೂ ಅವರ ಪುತ್ರ, ಇಂಗ್ಲೆಂಡ್ ಉದ್ಯೋಗಿ ಜಿ. ನವೀನ್ ಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಪೀಠ ಈ ಮಹತ್ವದ ತೀರ್ಪು ನೀಡಿದೆ.
ತಂದೆ ಪಿ. ಜವರಶೆಟ್ಟಿ ಅವರಿಗೆ ₹5 ಲಕ್ಷ ಹಾಗೂ ಪುತ್ರ ಜಿ. ನವೀನ್ ಕುಮಾರ್‌ಗೆ ₹4 ಲಕ್ಷ ಪರಿಹಾರವನ್ನು ನಗರ ಪೊಲೀಸ್ ಆಯುಕ್ತರು ಪಾವತಿಸಬೇಕು. ಈ ಪರಿಹಾರದ ಒಟ್ಟು ₹9 ಲಕ್ಷ ಹಣವನ್ನು ಅಕ್ರಮ ಬಂಧನ ಎಸಗಿದ್ದ ಅಂದಿನ ವಿದ್ಯಾರಣ್ಯಪುರ ಇನ್ಸ್‌ಪೆಕ್ಟರ್ ಅವರಿಂದಲೇ ವಸೂಲಿ ಮಾಡಬೇಕು. ತಪ್ಪಿತಸ್ಥ ಇನ್ಸ್‌ಪೆಕ್ಟರ್ ವಿರುದ್ಧ ಕೂಡಲೇ ಇಲಾಖಾ ವಿಚಾರಣೆ ಆರಂಭಿಸಬೇಕು ಎಂದು ಪೊಲೀಸ್ ಆಯುಕ್ತರಿಗೆ ನ್ಯಾಯಪೀಠ ಆದೇಶಿಸಿದೆ.
ಪೊಲೀಸರು 2014ರಲ್ಲಿ ನವೀನ್ ಕುಮಾರ್ ವಿರುದ್ಧ ಹೊರಡಿಸಿದ್ದ ಲುಕ್‌ಔಟ್ ನೋಟಿಸ್ ಹಾಗೂ ಅವರ ಬಂಧನವನ್ನು ಹೈಕೋರ್ಟ್ ‘ಅಕ್ರಮ’ ಎಂದು ಘೋಷಿಸಿದೆ.
ಪ್ರಕರಣದ ಹಿನ್ನೆಲೆ:
2014ರ ಮಾರ್ಚ್ 10ರಂದು ನವೀನ್ ಕುಮಾರ್ ಅವರ ಪತ್ನಿ, ವಿದ್ಯಾರಣ್ಯಪುರ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ದೂರು ನೀಡಿದ್ದರು. ಈ ಪ್ರಕರಣದಲ್ಲಿ ನವೀನ್‌ಗೆ ಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಮಂಜೂರಾಗಿತ್ತು. ಅಲ್ಲದೆ ನ್ಯಾಯಾಲಯ ಯಾವುದೇ ಜಾಮೀನು ರಹಿತ ಬಂಧನ ವಾರಂಟ್ (NBW) ಜಾರಿ ಮಾಡಿರಲಿಲ್ಲ .
ಹೀಗಿದ್ದರೂ, 2014ರ ಜುಲೈ 19ರಂದು ಇಂಗ್ಲೆಂಡ್‌ನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ನವೀನ್ ಅವರನ್ನು ಪೊಲೀಸರು ಅಕ್ರಮವಾಗಿ ಬಂಧಿಸಿದ್ದರು. ಜೊತೆಗೆ, ಅಂತಿಮ ಚಾರ್ಜ್‌ಶೀಟ್ ಸಲ್ಲಿಕೆಯಾಗಿದ್ದರೂ, ಹೃದ್ರೋಗದಿಂದ ಬಳಲುತ್ತಿದ್ದ ಅವರ ತಂದೆ ಜವರಶೆಟ್ಟಿ ಅವರನ್ನು ಖಾಸಗಿ ಕಾರಿನಲ್ಲಿ ಬಲವಂತವಾಗಿ ಮಲ್ಲೇಶ್ವರಂ ಠಾಣೆಗೆ ಕರೆದೊಯ್ದು ಕಿರುಕುಳ ನೀಡಿದ್ದರು. ಪೊಲೀಸರ ಈ ಅಕ್ರಮ ಬಂಧನವನ್ನು ಪ್ರಶ್ನಿಸಿ ಸಂತ್ರಸ್ತರು 2015ರಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.