ಸುದ್ದಿ

ಪತಿ,ಮಗುವನ್ನು ಕೊಂದು ಹೃದಯಾಘಾತದ ನಾಟಕವಾಡಿದ್ದ ಪತ್ನಿ ಅಂದರ್; ತನಿಖೆಯಲ್ಲಿ ಬಯಲಾಯ್ತು ತಂದೆ-ಮಗನ ಕೊಲೆ ರಹಸ್ಯ!

Share It

ಬೆಂಗಳೂರು: ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾದರು ಎಂದು ಪತಿ ಹಾಗೂ 5 ವರ್ಷದ ಮಗನನ್ನು ಪ್ರಿಯಕರನ ಜೊತೆ ಸೇರಿ ಹತ್ಯೆ ಮಾಡಿದ್ದ ಮೃತನ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಚಿಕ್ಕಬಾಣಾವರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಗುಡ್ಡೆಬಸವೇಶ್ವರ ನಗರದ ಹರಿಣಿ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆ ಹಾರೋಹಳ್ಳಿಯ ವಿನಯ್ ಬಂಧಿತರಾ ಗಿದ್ದು, ತನ್ನ ಮನೆಯಲ್ಲಿ ಪತಿ ಅಭಿನಂದನ್, ಮಗ ಯುದುವೀರ್ ಗೌಡನನ್ನು ಕೊಂದು ಬಳಿಕ ಹೃದಯಾಘಾತದಿಂದ ಸಾವು ಎಂದು ಹರಿಣಿ ಸುಳ್ಳಿನ ಕತೆ ಕಟ್ಟಿದ್ದಳು. ಆದರೆ ಆಕೆಯ ಹೇಳಿಕೆ ಮೇಲೆ ಶಂಕೆಗೊಂಡು ಎಸಿಪಿ ರವಿಕುಮಾರ್ ಹಾಗೂ ಇನ್ಸ್‌ಪೆಕ್ಟರ್ ಅಶೋಕ್ ಅವರ ತಂಡ ತನಿಖೆ ಮುಂದುವರಿಸಿದಾಗ ತಂದೆ-ಮಗನ ಸಾವಿನ ರಹಸ್ಯ ಬಯಲಾಗಿದೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

5 ವರ್ಷಗಳ ಹಿಂದೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗದ ಅಭಿನಂದನ್ ಹಾಗೂ ಮಾಗಡಿ ರಸ್ತೆಯ ದಾಸರಹಳ್ಳಿಯ ಹರಿಣಿ ವಿವಾಹವಾಗಿದ್ದು, ಈ ದಂಪತಿಗೆ 4 ವರ್ಷದ ಮಗ ಇದ್ದ. ಖಾಸಗಿ ಕಂಪನಿಯಲ್ಲಿ ಅಭಿನಂದನ್ ನೌಕರಿಯಲ್ಲಿದ್ದ. ಮದುವೆ ಬಳಿಕ ದಂಪತಿ ಪ್ರೀತಿಯಿಂದ ಇದ್ದರು.

ಆನ್ಲೈನ್ ಟ್ರೇಡಿಂಗ್ ಪರಿಚಯವಾದವನ ಜೊತೆ ಗೆಳೆತನ:
2 ವರ್ಷಗಳ ಬಳಿಕ ಅವರ ಸುಖ ಸಂಸಾರದಲ್ಲಿ ಬಿರುಕು ಮೂಡಿದೆ. ಆನ್‌ಲೈನ್‌ ಟ್ರೇಡಿಂಗ್‌ನಲ್ಲಿ ಹರಿಣಿಗೆ  ಹಾರೋಹಳ್ಳಿಯ ವಿನಯ್ ಎಂಬಾತನ ಪರಿಚಯವಾಗಿದೆ. ಕ್ರಮೇಣ ಈ ಸ್ನೇಹವು ಅನೈತಿಕ ಸಂಬಂಧಕ್ಕೆ ತಿರುಗಿದೆ. ಪತಿ ಕೆಲಸಕ್ಕೆ ತೆರಳಿದ ಬಳಿಕ ಹಗಲು ಹೊತ್ತಿನಲ್ಲಿ ಹರಿಣಿ ಮನೆಗೆ ಆಕೆಯ ಪ್ರಿಯಕರ ವಿನಯ್ ಬಂದು ಹೋಗುತ್ತಿದ್ದ ವಿಷಯ ಗಂಡನಿಗೆ ತಿಳಿದಿದೆ.

ಮಗುವಿನ ಭವಿಷ್ಯದ ಬಗ್ಗೆ ಕನಸು ಕಟ್ಟಿಕೊಂಡಿದ್ದ ತಂದೆ:

ಮಗುವಿನ ಭವಿಷ್ಯದ ಬಗ್ಗೆ ಅಪಾರ ಕನಸು ಕಟ್ಟಿಕೊಂಡೊದ್ದ ಅಭಿನಂದನ್ ಅಕ್ರಮ ಸಂಬಂಧವನ್ನು ಕಡಿದುಕೊಳ್ಳುವಂತೆ ತಾಕೀತು ಮಾಡಿದರೂ ಅದಕ್ಕೆ ಕ್ಯಾರೇ ಎನ್ನದೆ ವಿನಯ್ ಜತೆ ಆಕೆ ಸಂಗ ಮುಂದುವರೆಸಿದ್ದಳು. ತನ್ನ ಪತಿಯ ಎಚ್ಚರಿಕೆಗೆ ಅಂಜದೆ ಪ್ರಿಯಕರನ ಜತೆ ಆಕೆ ಊರೂರು ಸುತ್ತಾಡುತ್ತಿದ್ದಳು. ಇದೇ ಕಾರಣಕ್ಕೆ ಮನೆಯಲ್ಲಿ ಪರಸ್ಪರ ಜಗಳವಾಗಿದ್ದವು. ಕೊನೆಗೆ ಒಂದೇ ಮನೆಯಲ್ಲಿದ್ದರೂ ಸತಿ-ಪತಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಸ್ವೇಚ್ಛಾಚಾರದ ಬದುಕಿಗೆ ಅಡ್ಡಿಯಾಗಿದ್ದ ಪತಿಯ ಕೊಲೆಗೆ ಸಂಚು ರೂಪಿಸಿದ್ದ ಪತ್ನಿ!

ಮನೆಯಲ್ಲಿ ಪದೇ ಪದೇ ಪತಿ ಗಲಾಟೆ ಮಾಡುತ್ತಿದ್ದರಿಂದ ಕೆರಳಿದ ಹರಿಣಿ, ತನ್ನ ಶ್ವೇಚ್ಛಾಚಾರ ದ ಬದುಕಿಗೆ ಅಡ್ಡಿಯಾಗಿರುವ ಪತಿ ಕೊಲೆಗೆ ನಿರ್ಧರಿಸಿದ್ದಾಳೆ. ಈ ಬಗ್ಗೆ ಬಗ್ಗೆ ಪ್ರಿಯಕರ ವಿನಯ್ ಜತೆ ಆಕೆ ಸಂಚು ರೂಪಿಸಿದ್ದಳು. ಅಂತೆಯೇ ಭಾನುವಾರ ಪತಿ ಹಾಗೂ ಮಗನ ಜತೆ ತವರು ಮನೆಗೆ ಹೋಗಿದ್ದ ಹರಿಣಿ. ರಾತ್ರಿ ತಾಯಿ ಮನೆಯಲ್ಲಿ ಊಟ ಮುಗಿಸಿ ಮನೆಗೆ ಮರಳಿದ್ದಳು ಬಳಿಕ ಮನೆಯಲ್ಲಿ ಎಂದಿನಂತೆ ತನ್ನ ಮಗನ ಜತೆ ಅಭಿನಂದನ್ ಮಲಗಿದ್ದಾರೆ. ಪತಿ ನಿದ್ರೆಗೆ ಜಾರಿದ ಬಳಿಕ ವಿನಯ್ ನನ್ನು ರಾತ್ರಿ 11 ಗಂಟೆಗೆ ಮನೆಗೆ ಹರಿಣಿ ಕರೆಸಿಕೊಂಡಿದ್ದಾಳೆ. ನಂತರ ಪತಿಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾರೆ.
ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಅಭಿನಂದನ್ ಕುತ್ತಿಗೆ ಹಿಸುಕಿ ವಿನಯ್ ಹಾಗೂ ಹರಿಣಿ ಕೊಲೆಗೆ ಯತ್ನಿಸಿದ್ದಾರೆ. ಈ ಹಂತದಲ್ಲಿ ಆತ ಪ್ರತಿರೋಧ ತೋರಿದಾಗ ತಲೆಗೆ ಸೌಟಿನಿಂದ ಬಡಿದಿದ್ದಾರೆ. ತನ್ನ ತಂದೆ ನರಳಾಟದಿಂದ ಪಕ್ಕದಲ್ಲೇ ಮಲಗಿದ್ದ ಮಗು ಯದುವೀರ್‌ಗೆ ಎಚ್ಚರಿಕೆಯಾಗಿದೆ. ಅಷ್ಟರಲ್ಲಿ ಅಭಿನಂದನ್ ಉಸಿರು ಚೆಲ್ಲಿದ್ದಾರೆ. ತನ್ನ ತಂದೆಯನ್ನು ಹತ್ಯೆ ಮಾಡಿದ್ದನ್ನು ನೋಡಿದ ಮಗ ಭವಿಷ್ಯದಲ್ಲಿ ಕಂಟಕವಾಗುತ್ತಾನೆ ಎಂದು ಭಾವಿಸಿ ಮಗನನ್ನು ನಿಷ್ಕುರಣೆ ತಾಯಿ ಹರಿಣಿ ಕುತ್ತಿಗೆ ಕಿಸುಕಿ ಕೊಂದಿದ್ದಾಳೆ.  ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪೊಲೀಸರ ಮುಂದೆ ಕೊಲೆ ಸತ್ಯ ಬಾಯ್ಬಿಟ್ಟ ಪತ್ನಿ!

ಮೊದಲು ಪತಿಗೆ ಹೃದಯಾಘಾತವಾಗಿ ಸಾವಾಗಿದೆ ಎಂದೆಲ್ಲ ಹರಿಣಿ ಪೊಲೀಸರ ಮುಂದೆ ಸುಳ್ಳು ಹೇಳಿದ್ದಳು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಅಭಿನಂದನ್ ತಲೆಗೆ ಗಂಭೀರ ಸ್ವರೂಪದ ಪೆಟ್ಟಾಗಿರುವುದು ಪತ್ತೆಯಾಯಿತು. ಈ ಮಾಹಿತಿ ಮುಂದಿಟ್ಟು ಪೊಲೀಸರು ಪ್ರಶ್ನಿಸಿದಾಗ ಆಕೆ ಸತ್ಯ ಬಾಯ್ದಿಟ್ಟಿದ್ದಾಳೆ. ಈ ಹತ್ಯೆ ಎಸಗಿ ನಸುಕಿನ 3.30ಕ್ಕೆ ಪ್ರಿಯತಮೆ ಮನೆಯಿಂದ ಹೊರಟು ಊರು ಸೇರಿದ್ದ ಆರೋಪಿ ವಿನಯ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಆಸರೆಯಾಗಿದ್ದ ಮಗನನ್ನು ಕಳೆದುಕೊಂಡ ಮೃತನ ತಾಯಿ ಸಂಕಟ

ಇನ್ನು ಪತ್ನಿಯಿಂದಲೇ ಕೊಲೆಯಾದ ಅಭಿನಂದನ್ ಅವರ ಕುಟುಂಬದ ಪಾಲಿಗೆ ವಿಧಿ ಕ್ರೂರವಾಗಿದೆ. ಸರ್ಕಾರಿ ನೌಕರಿಯಲ್ಲಿದ್ದ ಅವರ ತಂದೆ 25 ವರ್ಷಗಳ ಹಿಂದೆಯೇ ಮೃತಪಟ್ಟಿದ್ದರು. ಬಳಿಕ ಅನುಕಂಪದ ಆಧಾರದಡಿ ಆತನ ತಾಯಿ ಭಾಗ್ಯಮ್ಮ ಅವರಿಗೆ ಸರ್ಕಾರಿ ನೌಕರಿ ಸಿಕ್ಕಿತು.ಸಧ್ಯ ಮಂಡ್ಯ ಜಿಲ್ಲೆಯಲ್ಲಿ ಸರ್ಕಾರಿ ಶಾಲೆ ಶಿಕ್ಷರಾಗಿ ನಿವೃತ್ತಿಯ ಅಂಚಿನಲ್ಲಿದ್ದಾರೆ. ಈಗ ಜೀವನಕ್ಕೆ ಆಸರೆಯಾಗಿದ್ದ ಒಬ್ಬನೇ ಮಗನನ್ನು ಕಳೆದುಕೊಂಡ ಮೃತನ ತಾಯಿ ಸಂಕಟ ಹೇಳತೀರದಾಗಿದೆ. ಇನ್ನೊಂದೆಡೆ ತಂದೆಯ ಕೊಲೆಯನ್ನು ನೋಡಿದ್ದ ಮಗು ಮುಂದೆ ನನಗೆ ಕಂಟಕವಾಗಬಹುದೆಂದುಅಅ ತಾನೇ ಹೆತ್ತ ಕರುಳ ಬಳ್ಳಿಯನ್ನೇ ದಿಂಬಿನಿಂದ ಉಸಿರುಗಟ್ಟಿಸಿ ಕೊಂದಿರುವ ಕೃತ್ಯ ಸಾರ್ವಜನಿಕರಲ್ಲಿ ತೀವ್ರ ನೋವುಂಟು ಮಾಡಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.


Share It

You cannot copy content of this page