ಸುದ್ದಿ

ಕೊಲೆ ಯತ್ನ ಪ್ರಕರಣ: ಅಪರಾಧಿಗೆ 10 ವರ್ಷ ಕಠಿಣ ಜೈಲು, ₹50 ಸಾವಿರ ದಂಡ

Share It

ಮೈಸೂರು: ಹಳೇ ದ್ವೇಷದ ಹಿನ್ನೆಲೆಯಲ್ಲಿ ಕಾರಿನ ಬಾನೆಟ್ ಮೇಲೆ ವ್ಯಕ್ತಿಯೊಬ್ಬರು ಬಿದ್ದಿದ್ದರೂ ಲೆಕ್ಕಿಸದೆ ಅಪಾಯಕಾರಿಯಾಗಿ ಕಾರು ಚಾಲನೆ ಮಾಡಿ ಕೊಲೆಗೆ ಯತ್ನಿಸಿದ ಗಂಭೀರ ಆರೋಪ ಸಾಬೀತಾಗಿದ್ದು, ಅಪರಾಧಿಗೆ ಮೈಸೂರಿನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹50,000 ದಂಡ ವಿಧಿಸಿ ತೀರ್ಪು ನೀಡಿದೆ.

​ಪ್ರಕರಣದ ವಿವರ:
2022ರಲ್ಲಿ ಮೈಸೂರಿನ ಎನ್‌.ಆರ್. ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಹಳೇ ದ್ವೇಷದ ಹಿನ್ನೆಲೆಯಲ್ಲಿ ಬಾಬು ಥಾಮಸ್, ಚಂದ್ರಶೇಖರ್ ಎಂಬುವವರ ಮೇಲೆ ದಾಳಿ ನಡೆಸಿದ್ದ. ಬಳಿಕ ಚಂದ್ರಶೇಖರ್ ಅವರಿಗೆ ಕಾರಿನಿಂದ ಡಿಕ್ಕಿ ಹೊಡೆದ ರಭಸಕ್ಕೆ ಅವರು ಕಾರಿನ ಬಾನೆಟ್ ಮೇಲೆ ಬಿದ್ದಿದ್ದರು. ಆದರೂ ಕಾರು ನಿಲ್ಲಿಸದ ಅಪರಾಧಿ, ಕೊಲೆ ಮಾಡುವ ದುರುದ್ದೇಶದಿಂದ ಚಂದ್ರಶೇಖರ್ ಅವರನ್ನು ಬಾನೆಟ್ ಮೇಲೆಯೇ ಸುಮಾರು 800 ಮೀಟರ್‌ಗೂ ಹೆಚ್ಚು ದೂರ ಅಪಾಯಕಾರಿಯಾಗಿ ಎಳೆದೊಯ್ದು ಕೆಳಗೆ ಕೆಡವಿದ್ದ.

ಈ ದೌರ್ಜನ್ಯದ ಕುರಿತು ಎನ್‌.ಆರ್. ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಜೈಕೀರ್ತಿ ಅವರು ಪ್ರಕರಣ ದಾಖಲಿಸಿಕೊಂಡು, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎಚ್. ಅನಂತ್ ಅವರು, ಆರೋಪಿಯ ಮೇಲಿನ ಅಪರಾಧ ಸಾಬೀತಾಗಿದೆ ಎಂದು ತೀರ್ಪು ನೀಡಿದ್ದಾರೆ.
​ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಸುಧಾ ಅವರು ವಾದ ಮಂಡಿಸಿದ್ದರು.


Share It

You cannot copy content of this page