ಹನೂರು: ಬುದ್ಧಿಮಾಂದ್ಯ ಮಹಿಳೆಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿ ಗರ್ಭಿಣಿಯಾಗಿಸಿದ್ದ ಆರೋಪಿಗೆ ಇಲ್ಲಿನ ವಿಶೇಷ ನ್ಯಾಯಾಲಯವು 10 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ₹10,000 ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ತಾಲೂಕಿನ ಕುರಟ್ಟಿ ಹೊಸೂರು ಡಿ.ವಿಲೇಜ್ ಗ್ರಾಮದ ಸಿದ್ದಯ್ಯ (60) ಶಿಕ್ಷೆಗೆ ಗುರಿಯಾದ ವ್ಯಕ್ತಿ.
ಅರಣ್ಯ ಪ್ರದೇಶಕ್ಕೆ ಆಡು-ಕುರಿ ಮೇಯಿಸಲು ಹೋಗುತ್ತಿದ್ದ ಬುದ್ಧಿಮಾಂದ್ಯ ಮಹಿಳೆಯ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಂಡಿದ್ದ ಆರೋಪಿ ಸಿದ್ದಯ್ಯ, ಆಕೆಯ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದ. ವಿಷಯವನ್ನು ಎಲ್ಲಾದರೂ ಬಾಯ್ಬಿಟ್ಟರೆ ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದ. ಈ ದೌರ್ಜನ್ಯದಿಂದಾಗಿ ಮಹಿಳೆ ಗರ್ಭಿಣಿಯಾಗಿದ್ದಳು. ಈ ಸಂಬಂಧ 2019ರ ಮೇ 2ರಂದು ರಾಮಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿದ್ದರು. ಸಂತ್ರಸ್ತೆ ಜನ್ಮ ನೀಡಿದ ಮಗುವಿನ ತಂದೆ ಆರೋಪಿ ಸಿದ್ದಯ್ಯನೇ ಎಂಬುದು ವೈಜ್ಞಾನಿಕ ತನಿಖೆಯಲ್ಲಿ ಸಾಬೀತಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶರು, ಆರೋಪಿಯ ಮೇಲಿನ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಈ ಮಹತ್ವದ ತೀರ್ಪು ಪ್ರಕಟಿಸಿದ್ದಾರೆ.
ನ್ಯಾಯಾಲಯ ವಿಧಿಸಿರುವ ₹10,000 ದಂಡದ ಮೊತ್ತ ಪಾವತಿಸದಿದ್ದರೆ ಆರೋಪಿ ಹೆಚ್ಚುವರಿಯಾಗಿ 6 ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ದಂಡದ ಮೊತ್ತದಲ್ಲಿ ₹8,000 ಅನ್ನು ಸಂತ್ರಸ್ತೆಗೆ ನೀಡಲು ಆದೇಶಿಸಲಾಗಿದೆ. ಇದರ ಜೊತೆಗೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ಸಂತ್ರಸ್ತೆಗೆ ಹೆಚ್ಚುವರಿ ಪರಿಹಾರ ಒದಗಿಸುವಂತೆಯೂ ನ್ಯಾಯಾಲಯ ಸೂಚನೆ ನೀಡಿದೆ.