ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ 14ನೇ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಲು ಸಲ್ಲಿಸಿರುವ ಅರ್ಜಿಯ ವಿಚಾರಣೆಯಲ್ಲಿ ತಮಗೂ ವಾದ ಮಂಡಿಸಲು ಅವಕಾಶ ನೀಡಬೇಕೆಂದು ನಟ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು 57ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದೆ.
ದರ್ಶನ್ ಪರ ವಕೀಲರಾದ ಹಷ್ಮತ್ ಪಾಷಾ ,ಮಾಫಿ ಸಾಕ್ಷಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಮತ್ತು ಈ ವಿಚಾರಣೆಯಲ್ಲಿ ತಮ್ಮ ಕಕ್ಷಿದಾರ ದರ್ಶನ್‌ಗೆ ವಾದ ಮಂಡಿಸಲು ಅವಕಾಶ ನೀಡಬೇಕು ಎಂದು ನ್ಯಾಯಪೀಠವನ್ನು ಕೋರಿದರು.
ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಪಿ. ಪ್ರಸನ್ನ ಕುಮಾರ್, “ಸಹ ಆರೋಪಿಯೊಬ್ಬ ಮಾಫಿ ಸಾಕ್ಷಿಯಾಗುವ ಪ್ರಕ್ರಿಯೆಯಲ್ಲಿ ಇತರ ಸಹ ಆರೋಪಿಗಳ ವಾದ ಆಲಿಸುವ ಅಗತ್ಯವಿಲ್ಲ. ಈ ಹಿಂದೆ ‘ವಿನಯ್ ಕುಲಕರ್ಣಿ’ ಪ್ರಕರಣದಲ್ಲೂ ಹೈಕೋರ್ಟ್ ಇದೇ ರೀತಿಯ ತೀರ್ಪು ನೀಡಿದೆ” ಎಂದು ವಾದ ಮಂಡಿಸಿದರು.
ಎಸ್‌ಪಿಪಿ ವಾದವನ್ನು ಪುರಸ್ಕರಿಸಿದ ನ್ಯಾಯಪೀಠ, ಸಹ ಆರೋಪಿಯ ವಾದಕ್ಕೂ ಮತ್ತು ಇನ್ನೊಬ್ಬ ಆರೋಪಿಗೆ ಕ್ಷಮಾದಾನ ನೀಡುವುದಕ್ಕೂ ಯಾವುದೇ ಸಂಬಂಧವಿಲ್ಲ. ಕ್ಷಮಾದಾನ ನೀಡುವ ಮುನ್ನ, ಆರೋಪಿಯು ಸಂಪೂರ್ಣ ಸತ್ಯವನ್ನು ಬಹಿರಂಗಪಡಿಸುತ್ತಿದ್ದಾನೆಯೇ ಎಂಬುದನ್ನು ಮಾತ್ರ ನ್ಯಾಯಾಲಯ ಪರಿಶೀಲಿಸುತ್ತದೆ ಎಂದು ಸ್ಪಷ್ಟಪಡಿಸಿತು.
ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಬೇಕೋ ಅಥವಾ ಬೇಡವೋ ಎಂಬ ಬಗ್ಗೆ ಅಂತಿಮ ಕೈಗೊಳ್ಳಲು ನ್ಯಾಯಾಲಯವು ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದೆ.