ಬೆಂಗಳೂರು: “ಬ್ಯಾಂಕ್ ಸಾಲದ ಕಂತು ಪಾವತಿಸಬೇಕಿದೆ ಎಂಬ ನೆಪವನ್ನೊಡ್ಡಿ ಪತಿಯಾದವನು ತನ್ನ ಕೌಟುಂಬಿಕ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ಯಾವುದೇ ಆಸ್ತಿ ಗಳಿಸುವ ಮೊದಲು ಹೆಂಡತಿ ಮತ್ತು ಮಗುವಿನ ಮೂಲಭೂತ ಅಗತ್ಯಗಳನ್ನು ಪೂರೈಸುವುದು ಪತಿಯ ಪ್ರಾಥಮಿಕ ಕರ್ತವ್ಯ” ಎಂದು ಕರ್ನಾಟಕ ಹೈಕೋರ್ಟ್ ಅತ್ಯಂತ ಮಹತ್ವದ ಆದೇಶ ನೀಡಿದೆ.
ತನ್ನ ಪತ್ನಿ ಮತ್ತು ಅಪ್ರಾಪ್ತ ಮಗನಿಗೆ ತಿಂಗಳಿಗೆ 15 ಸಾವಿರ ರೂಪಾಯಿ ಜೀವನಾಂಶ ಪಾವತಿಸುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ರೈಲ್ವೆ ಉದ್ಯೋಗಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಡಾ. ಚಿಲ್ಲಕ್ಕೂರು ಸುಮಲತಾ ಅವರಿದ್ದ ಏಕಸದಸ್ಯ ಪೀಠ ಈ ತೀರ್ಪು ಪ್ರಕಟಿಸಿದೆ.
ಪ್ರಕರಣದ ಹಿನ್ನೆಲೆ:
ಅರ್ಜಿದಾರರು ರೈಲ್ವೆ ಇಲಾಖೆಯಲ್ಲಿ ನೌಕರರಾಗಿದ್ದು, ಮಾಸಿಕ 54,550 ರೂ. ವೇತನ ಪಡೆಯುತ್ತಿದ್ದಾರೆ. “ತನ್ನ ವೇತನದ ಬಹುಪಾಲು ಹಣ ಗೃಹಸಾಲದ (ಹೌಸಿಂಗ್ ಲೋನ್) ಕಂತಿಗೆ ಜಮೆಯಾಗುವುದರಿಂದ ಕೈಗೆ ತಲುಪುವುದು ಕೇವಲ 25 ಸಾವಿರ ರೂ. ಮಾತ್ರ. ಆದ್ದರಿಂದ ಕೌಟುಂಬಿಕ ನ್ಯಾಯಾಲಯ ನಿಗದಿಪಡಿಸಿರುವ 15 ಸಾವಿರ ರೂ. ಜೀವನಾಂಶವನ್ನು ನೀಡಲು ಸಾಧ್ಯವಿಲ್ಲ” ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು. ಜೊತೆಗೆ ಪತ್ನಿಯು ಉದ್ಯೋಗದಲ್ಲಿದ್ದು 15 ಸಾವಿರ ರೂ. ಗಳಿಸುತ್ತಿದ್ದಾರೆ ಹಾಗೂ ಮಗುವಿನ ಜೈವಿಕ ತಾಯಿಯಲ್ಲ ಎಂಬ ಕಾರಣ ನೀಡಿ ಜೀವನಾಂಶ ನೀಡಿಕೆಯಿಂದ ವಿನಾಯಿತಿ ಕೋರಿದ್ದರು.
ಸಾಕು ತಾಯಿಯ ಉದಾತ್ತತೆಗೆ ನ್ಯಾಯಪೀಠ ಮೆಚ್ಚುಗೆ:
ಅರ್ಜಿದಾರರ ಮೊದಲ ಪತ್ನಿ ಹೆರಿಗೆಯ ಸಮಯದಲ್ಲೇ ಮೃತಪಟ್ಟಿದ್ದರಿಂದ, ಕುಟುಂಬದ ಹಿರಿಯರ ಸಮ್ಮತಿಯಂತೆ 2014ರಲ್ಲಿ ಪತ್ನಿಯ ತಂಗಿಯನ್ನೇ ವಿವಾಹವಾಗಿದ್ದರು. 2017ರಲ್ಲಿ ದಂಪತಿ ನಡುವೆ ಮನಸ್ತಾಪ ಉಂಟಾಗಿ ಪ್ರತ್ಯೇಕವಾಗಿದ್ದರೂ, ಎರಡನೇ ಪತ್ನಿಯು ತನ್ನ ಅಕ್ಕನ ಮಗುವನ್ನು ಸಾಕು ತಾಯಿಯಾಗಿ ಪ್ರೀತಿಯಿಂದ ಸಾಕಿ ಬೆಳೆಸುತ್ತಿದ್ದಾರೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠ, ಅರ್ಜಿದಾರರ ವಾದವನ್ನು ಸಂಪೂರ್ಣವಾಗಿ ತಳ್ಳಿಹಾಕಿತು. “ಎರಡನೇ ಹೆಂಡತಿಯು ಮಗುವಿನ ಹೆತ್ತ ತಾಯಿಯಾಗದಿದ್ದರೂ, ಆಕೆಯನ್ನು ಹೆತ್ತ ತಾಯಿಗಿಂತ ಹೆಚ್ಚಾಗಿ ಪ್ರೀತಿಯಿಂದ ಸಾಕಿ ಬೆಳೆಸುತ್ತಿದ್ದಾರೆ. ಪತ್ನಿಯ ನಡತೆಯ ಕುರಿತು ಪತಿ ಮಾಡಿರುವ ಆರೋಪಗಳಿಗೆ ಯಾವುದೇ ಸೂಕ್ತ ಸಾಕ್ಷ್ಯಾಧಾರಗಳಿಲ್ಲ” ಎಂದು ಸ್ಪಷ್ಟಪಡಿಸಿದ ಹೈಕೋರ್ಟ್, ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದು ಅರ್ಜಿಯನ್ನು ವಜಾಗೊಳಿಸಿತು.