ಬೆಂಗಳೂರು: ವರದಕ್ಷಿಣೆಗಾಗಿ ಪತ್ನಿಗೆ ಕಿರುಕುಳ ನೀಡಿ
ಕೊಲೆಗೆ ಯತ್ನಿಸಿದ ಆರೋಪದಡಿ ಧರ್ಮಸ್ಥಳ ಪೊಲೀಸ್ ಠಾಣೆಯ ಪಿಎಸ್‌ಐ ಪಿ.ಕಿಶೋರ್ ಸೇರಿದಂತೆ ನಾಲ್ವರ ವಿರುದ್ಧ ಇಲ್ಲಿನ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಸೋಮವಾರ ರಾತ್ರಿ ಎಫ್‌ಐಆರ್ ದಾಖಲಾಗಿದೆ.
ಕಿಶೋರ್ ಅವರ ಪತ್ನಿ, ನಾಗರಬಾವಿ ಟೀಚರ್ಸ್ ಕಾಲೊನಿಯ ಮಾನಸ ನಗರದ ನಿವಾಸಿ ಆರ್.ವರ್ಷಾ(27) ಅವರು ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಪತಿ ಕಿಶೋರ್ ಹಾಗೂ ಅವರ ಸಂಬಂಧಿಕರು ವರದಕ್ಷಿಣೆ ತರುವಂತೆ ಪದೇ ಪದೇ ಹಿಂಸೆ ನೀಡಿ, ಕತ್ತು ಹಿಸುಕಿ ಕೊಲೆಗೆ ಯತ್ನಿಸಿದ್ದಾರೆ’ ಎಂದು ಆರೋಪಿಸಿ, ವರ್ಷಾ ಅವರು ದೂರು ನೀಡಿದ್ದಾರೆ.
ಕಿಶೋರ್ ಅವರ ತಂದೆ ಪುಟ್ಟಚನ್ನಪ್ಪ, ತಾಯಿ ಸರಸ್ವತಮ್ಮ, ಸಹೋದರ ಪಿ.ಚಂದನ್ ಅವರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಎಲ್ಲರೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ನಿವಾಸಿಗಳು.
ದೂರಿನಲ್ಲಿ ಏನಿದೆ? ಮದುವೆ ಮಾತುಕತೆ ವೇಳೆ ಮದುವೆ ಖರ್ಚಿಗೆಂದು ₹25 ಲಕ್ಷ ಕೊಡುವಂತೆ ಪುಟ್ಟಚನ್ನಮ್ಮ ಹಾಗೂ ಕುಟುಂಬಸ್ಥರು ಕೇಳಿದ್ದರು. ಅಷ್ಟು ಹಣ ಕೊಡಲು ಸಾಧ್ಯವಿಲ್ಲ. ₹10 ಲಕ್ಷ ಕೊಡುತ್ತೇವೆ ಎಂದು ಹೇಳಿದಾಗ ಅವರು ಒಪ್ಪಿಕೊಂಡಿದ್ದರು. 2023ರ ನವೆಂಬರ್ 24ರಂದು ನಿಶ್ಚಿತಾರ್ಥ ನಡೆದಿತ್ತು. ಆಗ, 18 ಗ್ರಾಂನ ಚಿನ್ನದ ಉಂಗುರವನ್ನು ಕಿಶೋರ್‌ಗೆ ಹಾಕಿದ್ದೆವು. ಕೆಲವು ದಿನಗಳ ಬಳಿಕ ಕಾರು ಕೊಡಿಸುವಂತೆ ಕಿಶೋರ್ ಕೇಳಿದ್ದರು. ಕಾರು ಕೊಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದೆ. ತಂದೆಯವರಿಗೆ ವಿಷಯ ಗೊತ್ತಾಗಿ, ಕಾರು ಕೊಡಿಸುವುದಾಗಿ ಹೇಳಿದ್ದರು. ಬೆಂಗಳೂರಿನ ರಾಜಾಜಿನಗರದ ಹುಂಡೈ ಶೋರೂಂನಲ್ಲಿ ₹23 ಲಕ್ಷ ಮೌಲ್ಯದ ಕಾರು ಕೊಡಿಸಿದ್ದೆವು’ ಎಂದು ವರ್ಷಾ ಅವರು ನೀಡಿರುವ ದೂರು ಆಧರಿಸಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.