ಬೆಂಗಳೂರು: ಕರ್ನಾಟಕ ರಾಜ್ಯ ವಿದ್ಯುತ್ ಪ್ರಸರಣ ನಿಗಮ ನಿಯಮಿತದ (ಕೆಪಿಟಿಸಿಎಲ್) 404 ಸಹಾಯಕ ಎಂಜಿನಿಯರ್ (ಎಇ) ಮತ್ತು ಕಿರಿಯ ಎಂಜಿನಿಯರ್ (ಜೆಇ) ನೇಮಕ ಸಂಬಂಧ 2024ರ ಮೇ 8ರಂದು ಪ್ರಕಟಿಸಿದ್ದ ಆಯ್ಕೆ ಪಟ್ಟಿ ರದ್ದುಪಡಿಸಿರುವ ಹೈಕೋರ್ಟ್, ಶೀಘ್ರ ಮರು ಪರೀಕ್ಷೆ ನಡೆಸುವಂತೆ ಕೆಪಿಟಿಸಿಎಲ್ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ನಿರ್ದೇಶಿಸಿದೆ.
ಪರೀಕ್ಷೆಗೆ ಕೆಲವೇ ದಿನಗಳ ಮುನ್ನ ನೆಗೆಟಿವ್ ಮಾರ್ಕಿಂಗ್ ಕುರಿತು ಆದೇಶ ಹೊರಡಿಸಿದ ಕ್ರಮ ಪ್ರಶ್ನಿಸಿ ಅಭ್ಯರ್ಥಿಗಳಾದ ಬೆಂಗಳೂರಿನ ನವೀನ್ ಕುಮಾರ್ ಮತ್ತಿತರರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ. 2024ರ ಫೆ.18ರಂದು ನಡೆಸಿದ ಪರೀಕ್ಷೆಗೆ ಹಾಜರಾದ ಎಲ್ಲ ಅಭ್ಯರ್ಥಿಗಳಿಗೆ ಮರು ಪರೀಕ್ಷೆ ನಡೆಸಬೇಕು ಎಂದು ಸೂಚಿಸಿದೆ.