ಸಿನಿಮಾ

ತನ್ನೂರ ಸರ್ಕಾರಿ ಶಾಲೆಗೆ ಕಾಯಕಲ್ಪ ನೀಡುವ ಮೂಲಕ ಮಾದರಿಯಾದ ನಟ ಡಾಲಿ ಧನಂಜಯ್

Share It

ಬಡವರ ಮಕ್ಕಳು ಬೆಳೀಬೇಕು ಅಂದ ಡಾಲಿ ಈಗ ಸರ್ಕಾರಿ ಶಾಲೆಗಳು ಉಳೀಬೇಕು ಅನ್ನುವ ಸಂಕಲ್ಪ ಮಾಡಿದ್ದಾರೆ.’

ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್, ವೈದ್ಯೆ ಧನ್ಯತಾ ಅವರ ಜೊತೆಯಲ್ಲಿ ಫೆ.16ರಂದು ಸಪ್ತಪದಿ ತುಳಿಯಲಿದ್ದಾರೆ. ಈಗಾಗಲೇ ಮದುವೆ ತಯಾರಿ ಶುರುವಾಗಿದೆ. ಈ ಮಧ್ಯೆ ಹುಟ್ಟೂರಾದ ಅರಸೀಕೆರೆ ತಾಲೂಕಿನ ಕಾಳೇನಹಳ್ಳಿ ಸರ್ಕಾರಿ ಶಾಲೆಗೆ ಹೊಸ ರೂಪ ನೀಡುವ ಸಂಕಲ್ಪ ಮಾಡಿದ್ದಾರೆ. ಆ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ ಕನ್ನಡದ ಹೆಮ್ಮೆಯ ನಟ ಡಾಲಿ ಧನಂಜಯ್

ಸ್ಯಾಂಡಲ್ ವುಡ್ ನಟರ ಸಾಲಿನಲ್ಲಿ ವಿಶೇಷವಾಗಿ ನಿಲ್ಲುವ ನಟ ಡಾಲಿ ಧನಂಜಯ್. ಈಗಿನ ಕಾಲದಲ್ಲಿ ಹುಟ್ಟೂರಿನಿಂದ ಎಲ್ಲಾ ಗೌರವ ಪಡೆದವರು ಅದೇ ಊರಿಗೆ ಬೇಕಾದನ್ನ ಮಾಡಲು ಮನಸ್ಸು ಮಾಡೋದಿಲ್ಲ. ಆದರೆ ನಟ ಡಾಲಿ ತಾವು ಹುಟ್ಟಿದ ಊರಿನ ಶಾಲೆಯಲ್ಲಿ ಓದದೇ ಇದ್ದರೂ ತವರೂರಿನ ಶಾಲೆಗೆ ಹೊಸ ರೂಪ ನೀಡುತ್ತಿದ್ದಾರೆ. ಅದು ತಮ್ಮ ಮದುವೆ ಸಂದರ್ಭದಲ್ಲಿ ಅನ್ನೋದು ಇನ್ನೂ ವಿಶೇಷ.

ತಮ್ಮ ಊರಾದ ಕಾಳೇನಹಳ್ಳಿಯಲ್ಲಿ 1-7ನೇ ತರಗತಿವರೆಗಿನ ಸರ್ಕಾರಿ ಪ್ರಾಥಮಿಕ ಶಾಲೆಗೆ ಹೈಟೆಕ್ ಸ್ಪರ್ಶ ನೀಡಲು ಮುಂದಾಗಿದ್ದಾರೆ. ಈ ಶಾಲೆಯಲ್ಲಿ 80 ಮಕ್ಕಳಿದ್ದಾರೆ. ತಮ್ಮ ಮದುವೆಯನ್ನು ಅರ್ಥಪೂರ್ಣಗೊಳಿಸಲು ಇಡೀ ಶಾಲೆಗೆ ಕಾಯಕಲ್ಪ ನೀಡುವ ಮೂಲಕ ಸರ್ಕಾರಿ ಶಾಲೆ ಉಳಿಸಲು ಡಾಲಿ ಮುಂದಾಗಿದ್ದಾರೆ. ಇಡೀ ಶಾಲೆಯ ನೆಲಕ್ಕೆ ಟೈಲ್ಸ್, ಗೋಡೆಗಳಿಗೆ ಬಣ್ಣ, ಬಿರುಕು ಬಿಟ್ಟಿದ್ದ ಗೋಡೆಗೆ ಸಿಮೆಂಟ್, ಮಹಡಿಗಳ ದುರಸ್ತಿ,, ಗೇಟ್ ಮತ್ತು ಕಾಂಪೌಂಡ್ ನಿರ್ಮಾಣ, ಶಿಕ್ಷಕರ ಕೊಠಡಿಗೆ ಹೊಸ ರೂಪ, ಶೌಚಾಲಯ, ಅಡುಗೆ ಮನೆ, ಕುಡಿಯುವ ನೀರಿನ ವ್ಯವಸ್ಥೆ ಹೀಗೆ ತನ್ನೂರಿನ ಶಾಲೆಗೆ ಹೈಟೆಕ್‌ ಸ್ಪರ್ಶ ನೀಡುತ್ತಿದ್ದಾರೆ.

ತಾವು ಈ ಶಾಲೆಯಲ್ಲಿ ಓದದೇ ಇದ್ದರೂ ಕೂಡ ತಮ್ಮೂರಿನ ಶಾಲೆ ಚೆನ್ನಾಗಿರಬೇಕು ಹಾಗೂ ಮಕ್ಕಳು ಉತ್ತಮ ವಾತಾವರಣದಲ್ಲಿ ಕಲಿಯಬೇಕು ಅನ್ನೋದು ಡಾಲಿ ಧನಂಜಯ್ ಅವರ ಉದ್ದೇಶವಾಗಿದೆ. ಧನಂಜಯ್ ಅವರ ಈ ಕೆಲಸಕ್ಕೆ ಊರಿನ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಇದಕ್ಕಾಗಿ ಲಕ್ಷಾಂತರ ರೂಪಾಯಿಗಳು ಖರ್ಚಾಗುತ್ತಿದ್ದು, ನಟ ಡಾಲಿ ಹಣದ ಬಗ್ಗೆ ತಲೆ ಕೆಡಿಸಿಕೊಳ್ಳದೇ ಶಾಲೆಗೆ ಆಧುನಿಕತೆಯ ಸ್ಪರ್ಶ ನೀಡುವಲ್ಲಿ ಬೇಕಿರುವ ಎಲ್ಲಾ ರೀತಿಯ ವ್ಯವಸ್ಥೆ ಮಾಡಿ ಎಂದಿದ್ದಾರೆ. ತನ್ನೂರಿ ಶಾಲೆ ಚೆನ್ನಾಗಿರಬೇಕು ಮಕ್ಕಳ ಹಾಜರಾತಿ ಹೆಚ್ಚಾಗಬೇಕು ಸರ್ಕಾರಿ ಶಾಲೆಗಳು ಉಳಿಯಬೇಕು ಅನ್ನೋದಷ್ಟೇ ಡಾಲಿ ಧನಂಜಯ್ ಅವರ ಆಶಯ.


Share It

You cannot copy content of this page