ಸುದ್ದಿ

ವಿಮೆ ಹಣಕ್ಕಾಗಿ ಅಂಗವಿಕಲ ತಮ್ಮನನ್ನು ಕೊಂದಿದ್ದವನಿಗೆ ಜೀವಾವಧಿ ಶಿಕ್ಷೆ: ಅಧೀನ ನ್ಯಾಯಾಲಯದ ಆದೇಶ ಎತ್ತಿಹಿಡಿದ ಹೈಕೋರ್ಟ್

Share It

ಬೆಂಗಳೂರು: ₹45 ಲಕ್ಷ ವಿಮಾ ಹಣವನ್ನು ಲಪಟಾಯಿಸಲು ಒಡಹುಟ್ಟಿದ ತಮ್ಮನನ್ನೇ ಕೊಲೆ ಮಾಡಿ ಸಾಕ್ಷ್ಯಗಳ ನಾಶಕ್ಕಾಗಿ ಮೃತ ದೇಹವನ್ನು  ಸುಟ್ಟು ಹಾಕಿದ್ದ ವ್ಯಕ್ತಿಗೆ ವಿಚರಣಾ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆ ಪ್ರಶ್ನಿಸಿ ಅಪರಾಧಿ ಶಿಕಾರಿಪುರ ತಾಲೂಕಿನ ಅಮಟೆಕೊಪ್ಪದ ಕುಮಾರ್ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಪಿ.ಸಂದೇಶ್‌ ಮತ್ತು ನ್ಯಾಯಮೂರ್ತಿ ಟಿ.ವೆಂಕಟೇಶ್ ನಾಯ್ಡ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಅರ್ಜಿದಾರ ಆರೋಪಿ ಕುಮಾರ್ ಅವರು ತನ್ನ ತಮ್ಮ  ಅಂಗವಿಕಲನಾಗಿದ್ದ ಮೃತ ಉಮೇಶ್, ತನ್ನ ಮಾವನ ಮನೆಯಲ್ಲಿದ್ದರೂ ತಾನೇ ನೋಡಿಕೊಳ್ಳುವುದಾಗಿ ಮನೆಗೆ ಕರೆದುಕೊಂಡು ಬಂದಿದ್ದ. ಮೃತ ಉಮೇಶ್ ಹೆಸರಿನಲ್ಲಿ 2012ರಲ್ಲಿಯೇ 20 ಲಕ್ಷದ ವಿಮೆ ಪಡೆದುಕೊಂಡಿದ್ದರೂ, ಅದನ್ನು ಒಂದು ಕಂತಿನ ಬಳಿಕ ಪಾವತಿಸಿರಲಿಲ್ಲ. ಆದರೆ, ಸಾಯುವುದಕ್ಕೂ ನಾಲ್ಕು ತಿಂಗಳ ಮುನ್ನ ಎಲ್ಲ ಬಾಕಿ ಕಂತುಗಳ ಮೊತ್ತವನ್ನು ಆರೋಪಿಯೇ ಪಾವತಿಸಿದ್ದ ಅಲ್ಲದೇ, ಮತ್ತೊಂದು ವಿಮಾ ಪಾಲಿಸಿಯನ್ನು ಮೃತರ ಹೆಸರಿನಲ್ಲಿ ಪಡೆದುಕೊಂಡಿದ್ದು, ಬ್ಯಾಂಕ್ ನಲ್ಲಿ ಖಾತೆ ತೆರೆದಿದ್ದಾನೆ. ಈ ಎಲ್ಲ ಪ್ರಕ್ರಿಯೆನ್ನು ಜನವರಿ ಮೊದಲ ವಾರದಲ್ಲಿ ನಡೆಸಿದ್ದು, ಇದಾದ ನಾಲ್ಕು ತಿಂಗಳ ಬಳಿಕ ತಮ್ಮ ಉಮೇಶ್ ನನ್ನು ಕೊಲೆ ಮಾಡಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾನೆಂದು ಕತೆ ಕಟ್ಟಿದ್ದ.

ಅಪರಾಧಿ ಕುಮಾರನ ಕೃತ್ಯ ಸಾಕ್ಷ್ಯಾಧಾರಗಳ ಸಮೇತ ಸಾಬೀತಾಗಿದೆ. ಹಾಗಾಗಿ, ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿರುವ ಅಧೀನ ನ್ಯಾಯಾಲಯದ ಆದೇಶ ಸರಿಯಾಗಿದೆ ಎಂದು ಹೈಕೋರ್ಟ್ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: 2015ರ ಮೇ 1ರಂದು ಬೆಳಗ್ಗೆ
ಸುಮಾರು 5:30ರ ಸಮಯದಲ್ಲಿ ಶಿಕಾರಿಪುರದ ಗ್ರಾಮೀಣ ಪೊಲೀಸ್‌ ಠಾಣೆ ವ್ಯಾಪ್ತಿಯ ರಸ್ತೆ ಬದಿಯಲ್ಲಿ ಅಮಟೆಕೊಪ್ಪದ ಗ್ರಾಮದ ನಿವಾಸಿ ಮೃತ ಉಮೇಶ್ ಶವ ಪತ್ತೆಯಾಗಿತ್ತು.

ವಾಯು ವಿಹಾರಕ್ಕೆ ಹೊಗಿದ್ದ ಸಂದರ್ಭದಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಉಮೇಶ್ ಸಾವಿಗೀಡಾಗಿರಬಹುದು ಎಂದು ಆರಂಭದಲ್ಲಿ ಶಂಕಿಸಲಾಗಿತ್ತು. ಆದರೆ, ಮೃತನ ಹೆಸರಿನಲ್ಲಿರುವ 45 ಲಕ್ಷ ರು. ವಿಮಾ ಪಾಲಿಸಿ ಹಣ ಲಪಟಾಯಿಸಲು ಉಮೇಶ್‌ನನ್ನು ಸ್ವತಃ ಅಣ್ಣ ಕುಮಾರ್ ಕೊಲೆ ಮಾಡಿ, ರಸ್ತೆ ಅಪಘಾತದಿಂದ ಸಾವು ಸಂಭವಿಸಿರುವುದಾಗಿ ಬಿಂಬಿಸಿದ್ದಾನೆ ಎಂದು ಆರೋಪಿಸಿ ಮೃತನ ಮಾವ ದೂರು ದಾಖಲಿಸಿದ್ದರು.

ದೂರಿನ ತನಿಖೆ ನಡೆಸಿದ್ದ ಪೊಲೀಸರು, ಉಮೇಶ್‌ನನ್ನು ಕುಮಾರ್‌ ಕೊಲೆ ಮಾಡಿರುವ ಸಂಗತಿ ಬಯಲಿಗೆ ಎಳೆದಿದ್ದರು. ಸ್ಥಳೀಯ ಸೆಷನ್ಸ್ ನ್ಯಾಯಾಲಯವು ಕುಮಾರ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ಆದೇಶ ರದ್ದು ಕೋರಿ ಅಪರಾಧಿಯು ಹೈಕೋರ್ಟ್‌ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದ.


Share It

You cannot copy content of this page