ಬೆಂಗಳೂರು :ಫುಟ್‌ಪಾತ್ ತೆರವು ಕಾರ್ಯಾಚರಣೆ ವೇಳೆ ಜಿಬಿಎ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 12 ಮಂದಿ ಆರೋಪಿಗಳನ್ನು ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಂಗಳವಾರ ಮಧ್ಯಾಹ್ನ ಶಿವಾಜಿನಗರ ಬಸ್ ನಿಲ್ದಾಣ ಸುತ್ತಲಿನ ಪ್ರದೇಶದಲ್ಲಿ ಫುಟ್‌ಪಾತ್ ತೆರವು ಕಾರ್ಯಾಚರಣೆ ವೇಳೆ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ ಗೂಂಡಾ ವರ್ತನೆ ತೋರಿದ್ದರು.
ವೈಟ್‌ಫೀಲ್ಡ್‌ನ ಸಿದ್ದಾಪುರ ನಿವಾಸಿ ಹಾಗೂ ವರ್ತೂರು ಠಾಣೆಯ ರೌಡಿಶೀಟರ್ ಬಸವರಾಜ ಪಡುಕೋಟೆ (57), ಸಿದ್ದಾಪುರದ ನಿವಾಸಿಗಳಾದ ರಘು (28), ಭರತ (25), ಪರಶುರಾಮ್ (27) ಕಲಬುರಗಿ ಮೂಲದ ಬಸವರಾಜು (28), ಶಿವಾಜಿನಗರದ ಶಂಕರ್ (52), ಪಾರ್ಥಿಬನ್ (23), ಕೊಟ್ರೇಶ್ (26), ಮುಜಾಹಿದ್ ಅಹಮ್ಮದ್ (39), ಹೊಂಗಸಂದ್ರದ ರಾಜನ್ (19), ಯಲಚೇನಹಳ್ಳಿ ಕಿರಣ್ (34) ಹಾಗೂ ರಂಗಸ್ವಾಮಿ (49) ಬಂಧಿತ ಆರೋಪಿಗಳು.
ಬಸವರಾಜ ಪಡುಕೋಟೆ, ರಘು, ಬಸವರಾಜು, ಪಾರ್ಥಿಬನ್ ಮತ್ತು ಪರಶುರಾಮ್ ಎಂಬುವರನ್ನು ಪೊಲೀಸ್ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗಿದೆ. ಉಳಿದ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.