ನವದೆಹಲಿ: ನಾಲ್ಕು ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ, ಸಂತ್ರಸ್ತೆಗೆ ಸಕಾಲದಲ್ಲಿ ಚಿಕಿತ್ಸೆ ನೀಡದ ಉತ್ತರ ಪ್ರದೇಶದ ಎರಡು ಖಾಸಗಿ ಆಸ್ಪತ್ರೆಗಳು ಮತ್ತು ಅಲ್ಲಿನ ವೈದ್ಯರನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತರಾಟೆಗೆ ತೆಗೆದುಕೊಂಡಿತು.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯಾ ಬಾಗ್ನಿ ಮತ್ತು ವಿ.ಮೋಹನ್ ಅವರನ್ನು ಒಳಗೊಂಡ ನ್ಯಾಯಪೀಠವು, ಸಂತ್ರಸ್ತೆಯ ಕುಟುಂಬಕ್ಕೆ ನ್ಯಾಯಯೋಚಿತ ಪರಿಹಾರ ನೀಡುವಂತೆ ಆಸ್ಪತ್ರೆಗಳಿಗೆ ಆದೇಶಿಸಿತು.
ತುರ್ತು ಸಂದರ್ಭಕ್ಕೆ ಸ್ಪಂದಿಸಿ ಸಕಾಲಕ್ಕೆ ಚಿಕಿತ್ಸೆ ನೀಡಿ ಕರ್ತವ್ಯ ನಿಭಾಯಿಸಲು ಆಗಲಿಲ್ಲ ಎಂದ ಮೇಲೆ ನೀವು ವೈದ್ಯರು ಎಂದು ಏಕೆ ಹೇಳಿಕೊಳ್ಳಬೇಕು? ವೈದ್ಯರು ಎಂದು ಬರೆದುಕೊಳ್ಳುವ ನೈತಿಕತೆ ನಿಮಗಿಲ್ಲ. ಪ್ರಕರಣದ ಸೂಕ್ಷ್ಮತೆಯ ಅರಿವು ಇದ್ದಿದ್ದರೆ, ಬಾಲಕಿಯ ಚಿಕಿತ್ಸೆಗೆ ಅಗತ್ಯವಿರುವ ಸೌಕರ್ಯ ನಿಮ್ಮಲ್ಲಿ ಇಲ್ಲದಿರುವುದನ್ನು ಮನಗಂಡು ಆಕೆಯನ್ನು ಬೇರೆ ಆಸ್ಪತ್ರೆಗೆ ಕರೆದೊಯುತ್ತಿದ್ದಿರಿ. ಆದರೆ ಆಕೆ ಬಡವಳು ಎಂಬ ಕಾರಣಕ್ಕೆ ನೀವು ನಿರ್ಲಕ್ಷಿಸಿದಿರಿ’ ಎಂದು ಸಿಜೆಐ ತರಾಟೆಗೆ ತೆಗೆದುಕೊಂಡರು. ಬಳಿಕ ಪ್ರಕರಣದ ವಿಚಾರಣೆಯನ್ನು ನ್ಯಾಯಪೀಠ ಮುಂದಿನ ವಾರಕ್ಕೆ ಮುಂದೂಡಿತು.
ಏನಿದು ಪ್ರಕರಣ: ಮಾರ್ಚ್ 16ರಂದು ಚಾಕೊಲೇಟ್ ಕೊಡಿಸುವ ಆಮಿಷವೊಡ್ಡಿ ಬಾಲಕಿಯನ್ನು ಕರೆದೊಯ್ದ ನೆರೆಹೊರೆಯ ವ್ಯಕ್ತಿಯೊಬ್ಬ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ಮಗಳು ಮನೆಗೆ ಬಾರದಿದ್ದಾಗ ಆಕೆಗಾಗಿ ಹುಡುಕಾಟ ನಡೆಸಿದಾಗ ಪ್ರಜ್ಞೆ ಕಳೆದುಕೊಂಡ ಸ್ಥಿತಿಯಲ್ಲಿ ರಕ್ತದ ಮಡುವಿನಲ್ಲಿ ಬಾಲಕಿ ಪತ್ತೆಯಾಗಿದ್ದಳು. ಆಕೆಯನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲು ಎರಡು ಖಾಸಗಿ ಆಸ್ಪತ್ರೆಗಳು ನಿರಾಕರಿಸಿದ್ದವು. ಬಳಿಕ ಗಾಜಿಯಾಬಾದ್ ಸರ್ಕಾರಿ ಆಸ್ಪತ್ರೆಗೆ ಆಕೆಯನ್ನು ಕರೆದೊಯ್ಯಲಾಗಿತ್ತು. ಆದರೆ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು.