ಈ-ನ್ಯೂಸ್ ವರದಿ, ಬೆಂಗಳೂರು
ನಗರ ಪ್ರದೇಶಗಳಲ್ಲಿ ವಿದ್ಯಾರ್ಥಿಗಳಿಂದ ವಾರ್ಷಿಕ 50 ಸಾವಿರ ರೂಪಾಯಿಗೂ ಹೆಚ್ಚು ಶುಲ್ಕ ಸಂಗ್ರಹಿಸುವ ಖಾಸಗಿ ಶಾಲೆಗಳು ಕಡ್ಡಾಯವಾಗಿ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ದತ್ತು ಪಡೆದುಕೊಳ್ಳಬೇಕು. ಇಲ್ಲವಾದಲ್ಲಿ ಅಂತಹ ಖಾಸಗಿ ಶಾಲೆಗಳ ಶುಲ್ಕಕ್ಕೆ ಸರ್ಕಾರವೇ ಗರಿಷ್ಠ ಮಿತಿ (Cap) ನಿಗದಿಪಡಿಸಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಗುರುವಾರ ಆಯೋಜಿಸಿದ್ದ ಜಾಗತಿಕ ಸಿಎಸ್‌ಆರ್ ಮತ್ತು ಸುಸ್ಥಿರ ಅಭಿವೃದ್ಧಿ ಶೃಂಗಸಭೆ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಜ್ಯಕ್ಕೆ ಸಿಎಸ್‌ಆರ್ ನಿಧಿ ಅಡಿ ಕಾರ್ಪೋರೇಟ್ ಸಂಸ್ಥೆಗಳು ಸುಮಾರು 10 ಸಾವಿರ ಕೋಟಿ ರು. ನೀಡುತ್ತವೆ. ಅದರಲ್ಲಿ ಶೇ.50ರಷ್ಟು ಹಣವನ್ನು ಕಾರ್ಪೋರೇಟ್ ಸಂಸ್ಥೆಗಳು ದುರುಪಯೋಗ ಮಾಡಿಕೊಳ್ಳುತ್ತಿದ್ದು, ಸಮರ್ಪಕವಾಗಿ ನಿಧಿ ಬಳಕೆ ಮಾಡುತ್ತಿಲ್ಲ. ಹೀಗಾಗಿ ಸಿಎಸ್‌ಆರ್ ನಿಧಿ ಬಳಕೆ ಕುರಿತು ನಿಗಾ ವಹಿಸಲು ಹಿರಿಯ ಐಎಎಸ್ ಅಧಿಕಾರಿಗಳನ್ನೊಳಗೊಂಡ ಉನ್ನತ ಮಟ್ಟದ ಸಮಿತಿ ರಚಿಸಲಾಗುವುದು ಎಂದರು.
ದತ್ತು ಪಡೆಯುವ ಖಾಸಗಿ ಶಾಲೆಗಳು ಮೂಲಸೌಕರ್ಯಕ್ಕಿಂತ ಹೆಚ್ಚಾಗಿ, ಸರ್ಕಾರಿ ಶಾಲೆಗಳಿಗೆ ಉತ್ತಮ ಹಾಗೂ ಅನುಭವಸ್ಥ ಬೋಧಕ ಸಿಬ್ಬಂದಿಯನ್ನು (ಶಿಕ್ಷಕರನ್ನು) ನಿಯೋಜಿಸಲು ಆದ್ಯತೆ ನೀಡಬೇಕು. “ನಾವು ಕೂಡ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿದ್ದೇವೆ. ಗ್ರಾಮೀಣ ಭಾಗದ ಸರ್ಕಾರಿ ಶಾಲೆಯನ್ನು ದತ್ತು ಪಡೆಯುವಂತೆ ನನ್ನ ಮಗಳಿಗೆ ಸೂಚಿಸಿದ್ದೆ. ಅದರಂತೆ ಆಕೆ ಈಗಾಗಲೇ ಮೂರು ಶಾಲೆಗಳನ್ನು ದತ್ತು ಪಡೆದು ನಿರ್ವಹಿಸುತ್ತಿದ್ದಾಳೆ” ಎಂದು ತಮ್ಮ ಕುಟುಂಬದ ಉದಾಹರಣೆ ನೀಡಿದರು.
2,000 ಸುಸಜ್ಜಿತ ಶಾಲೆಗಳ ನಿರ್ಮಾಣ: ಗ್ರಾಮೀಣ ಮಕ್ಕಳಿಗೂ ನಗರದ ಮಾದರಿಯಲ್ಲಿಯೇ ಗುಣಮಟ್ಟದ ಶಿಕ್ಷಣ ಸಿಗಬೇಕೆಂಬುದು ಸರ್ಕಾರದ ಗುರಿ. ಇದಕ್ಕಾಗಿ ರಾಜ್ಯದಲ್ಲಿ ಈಗಾಗಲೇ 2,000 ಸೂಕ್ತ ಜಾಗಗಳನ್ನು ಗುರುತಿಸಲಾಗಿದ್ದು, ಕಾರ್ಪೊರೇಟ್ ಸಂಸ್ಥೆಗಳು ಸಿಎಸ್‌ಆರ್ ನಿಧಿಯಡಿ ಅಲ್ಲಿ ಅತ್ಯುತ್ತಮ ಮೂಲಸೌಕರ್ಯವುಳ್ಳ ಶಾಲೆಗಳನ್ನು ನಿರ್ಮಿಸಿಕೊಡಬೇಕು ಎಂದು ಕರೆ ನೀಡಿದರು.
ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೇ. 7.5 ಮೀಸಲಾತಿ:
ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಗ್ರಾಮೀಣ ಅಭ್ಯರ್ಥಿಗಳಿಗೆ ನೀಡಲಾಗುತ್ತಿರುವ ಶೇ. 15ರಷ್ಟು ಮೀಸಲಾತಿಯಲ್ಲಿ, ಶೇ. 7.5ರಷ್ಟು ಮೀಸಲಾತಿಯನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳಿಗೆ ನೀಡಲು ಕಾಯ್ದೆಗೆ ತಿದ್ದುಪಡಿ ತರಲಾಗುವುದು. ಈ ಪ್ರಕ್ರಿಯೆಯನ್ನು ಮುಂದಿನ 100 ದಿನಗಳ ಒಳಗಾಗಿ ಪೂರ್ಣಗೊಳಿಸಲಾಗುವುದು ಎಂದು ಅವರು ತಿಳಿಸಿದರು.