ಸುದ್ದಿ

ಪತಿಗಿಂತ ಹೆಚ್ಚು ಆದಾಯ: ಅಮೆರಿಕದಲ್ಲಿರುವ ಮಹಿಳೆಯ ಜೀವನಾಂಶ ಅರ್ಜಿ ವಜಾಗೊಳಿಸಿದ ಹೈಕೋರ್ಟ್

Share It

​ಮುಂಬೈ: ಪತಿಗಿಂತ ತಾನೇ ಹೆಚ್ಚಿನ ಆದಾಯ ಹೊಂದಿರುವ ಮಹಿಳೆಯೊಬ್ಬರಿಗೆ ಮಧ್ಯಂತರ ಜೀವನಾಂಶ ನೀಡಲು ಬಾಂಬೆ ಹೈಕೋರ್ಟ್ ನಿರಾಕರಿಸಿದೆ. ವಿದೇಶದಲ್ಲಿ ಜೀವನ ವೆಚ್ಚ ಹೆಚ್ಚಾಗಿದೆ ಎಂಬ ಒಂದೇ ಕಾರಣಕ್ಕೆ ಜೀವನಾಂಶ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿರುವ ನ್ಯಾಯಾಲಯ, ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಎತ್ತಿಹಿಡಿದಿದೆ.

​ನ್ಯಾಯಮೂರ್ತಿ ಭಾರತಿ ಡಂಗ್ರೆ ಹಾಗೂ ನ್ಯಾಯಮೂರ್ತಿ ಮಂಜೂಷಾ ದೇಶಪಾಂಡೆ ಅವರಿದ್ದ ವಿಭಾಗೀಯ ಪೀಠವು, ಮಾಸಿಕ 1 ಲಕ್ಷ ರೂಪಾಯಿ ಮಧ್ಯಂತರ ಜೀವನಾಂಶ ಕೋರಿ ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಈ ತೀರ್ಪು ನೀಡಿದೆ.

​ಪತಿಗಿಂತ ಹೆಂಡತಿಯ ಆದಾಯವೇ ಹೆಚ್ಚು: ಅಮೆರಿಕದ ನ್ಯೂಜೆರ್ಸಿಯಲ್ಲಿ ವಾಸಿಸುತ್ತಿರುವ ಈ ಮಹಿಳೆ ಪ್ರಸ್ತುತ ‘ಮಾರ್ಕ್ ಇನ್ಫೋಟೆಕ್’ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ತಿಂಗಳಿಗೆ ಸುಮಾರು ₹8 ಲಕ್ಷ ($8,700) ಆದಾಯ ಗಳಿಸುತ್ತಿದ್ದಾರೆ. ಇದು ಅವರ ಪತಿಯ ವೇತನಕ್ಕಿಂತ ಹೆಚ್ಚಾಗಿದೆ.

ಪತಿಯೂ ಸಹ ಐಟಿ ಕ್ಷೇತ್ರದಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದು, ಕೃತಕ ಬುದ್ಧಿಮತ್ತೆಯ (AI) ವೇಗದ ಬೆಳವಣಿಗೆ ಹಾಗೂ ಹೆಚ್ಚುತ್ತಿರುವ ಸ್ಪರ್ಧೆಯಿಂದಾಗಿ ಅವರ ಉದ್ಯೋಗಕ್ಕೆ ಅನಿಶ್ಚಿತತೆ ಎದುರಾಗುವ ಸಾಧ್ಯತೆಯಿದೆ. ಇಂತಹ ಸಂದರ್ಭದಲ್ಲಿ ಪತಿಗೆ ಆರ್ಥಿಕ ಹೊರೆ ಹಾಕುವುದು ಸೂಕ್ತವಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ದಂಪತಿಯ ಹಿರಿಯ ಮಗು ತಂದೆಯ ವಶದಲ್ಲಿದ್ದರೆ, ಕಿರಿಯ ಮಗುವಿನ ಜವಾಬ್ದಾರಿಯನ್ನು ತಾಯಿ ವಹಿಸಿಕೊಂಡಿದ್ದಾರೆ.

ಪ್ರಕರಣದ ಹಿನ್ನೆಲೆ:
2011 ರಿಂದ ಅಮೆರಿಕದಲ್ಲಿ ವಾಸಿಸುತ್ತಿರುವ ಈ ಮಹಿಳೆ, ಮಧ್ಯಂತರ ಜೀವನಾಂಶ ಕೋರಿ ನೀಡಿದ್ದ ಅರ್ಜಿಯನ್ನು ಈ ಮೊದಲು ಕೌಟುಂಬಿಕ ನ್ಯಾಯಾಲಯವೂ ತಿರಸ್ಕರಿಸಿತ್ತು. ಆದರೆ, ಕಾನೂನು ಹೋರಾಟದ ವೆಚ್ಚವಾಗಿ ₹25,000 ಪಾವತಿಸುವಂತೆ ಪತಿಗೆ ಸೂಚಿಸಿತ್ತು. ಕೌಟುಂಬಿಕ ನ್ಯಾಯಾಲಯದ ಈ ಆದೇಶವನ್ನು ಪ್ರಶ್ನಿಸಿ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ಅರ್ಜಿದಾರರ ಮನವಿಯನ್ನು ವಜಾಗೊಳಿಸಿದೆ.


Share It

You cannot copy content of this page