ಪತಿ-ಪತ್ನಿ ನಡುವಿನ ಕೌಟುಂಬಿಕ ಕಲಹ ಹಾಗೂ ಪತ್ನಿಯ ಮೇಲಿನ ಸಂಶಯದ ರೋಗ ಇಬ್ಬರು ಮುಗ್ಧ ಮಕ್ಕಳ ಪ್ರಾಣಕ್ಕೆ ಕಂಟಕ ತಂದಿಟ್ಟಿದೆ. ಪತ್ನಿ ತನ್ನೊಂದಿಗೆ ಸಂಸಾರಕ್ಕೆ ಬರುತ್ತಿಲ್ಲ ಎಂಬ ಆಕ್ರೋಶದಿಂದ ಹೆತ್ತ ತಂದೆಯೊಬ್ಬ ಕನಿಷ್ಠ ಮಾನವೀಯತೆಯನ್ನೂ ಮರೆತು ಇಬ್ಬರು ಮಕ್ಕಳಿಗೆ ತಂಪಾದ ಪಾನೀಯದಲ್ಲಿ ಇಲಿ ಪಾಷಾಣ ಬೆರೆಸಿ ಕುಡಿಸಿ, ತಾನೂ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ.
ಇಲಿ ಪಾಷಾಣ ಬೆರೆಸಿದ ಪಾನಿಯ ಕುಡಿದು ತೀವ್ರ ಅಸ್ವಸ್ಥಗೊಂಡಿದ್ದ 10 ವರ್ಷದ ಪುತ್ರಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರೆ, 8 ವರ್ಷದ ಪುತ್ರ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.
ಪ್ರೇಮ ವಿವಾಹ, ಕೌಟುಂಬಿಕ ಕಲಹ:
ಪ್ರವಳಿಕ ಹಾಗೂ ವಿಜಯಕುಮಾರ್ ಎಂಬುವವರು 12 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಇವರಿಗೆ ಆದ್ಯಾ (10) ಎಂಬ ಮಗಳು ಹಾಗೂ ಸುಪ್ರೀತ್ (8) ಎಂಬ ಮಗನಿದ್ದಾನೆ. ಯಾವುದೇ ಕೆಲಸ ಮಾಡದ ವಿಜಯಕುಮಾರ್, ನಿರಂತರವಾಗಿ ಪತ್ನಿಯ ನಡತೆಯ ಮೇಲೆ ಸಂಶಯಪಟ್ಟು ಕಿರುಕುಳ ನೀಡುತ್ತಿದ್ದ. ಪತಿಯ ಕಿರುಕುಳ ತಾಳಲಾರದೆ ಪ್ರವಳಿಕ ಒಂಗೋಲ್ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಕೌನ್ಸೆಲಿಂಗ್ ನಡೆಸಿದರೂ ವಿಜಯಕುಮಾರ್ ನಡೆ ಬದಲಾಗಲಿಲ್ಲ. ಇದರಿಂದ ಬೇಸತ್ತ ಪ್ರವಳಿಕ, ಮಕ್ಕಳನ್ನು ಪತಿಯ ಬಳಿಯೇ ಬಿಟ್ಟು ಕಳೆದ ಮೂರು ತಿಂಗಳಿಂದ ಒಂಗೋಲ್‌ನ ‘ಸ್ತ್ರೀಶಕ್ತಿ ಸದನ’ದಲ್ಲಿ ಆಶ್ರಯ ಪಡೆದಿದ್ದರು.
ಜಗಳದಿಂದ ಉದ್ಭವಿಸಿದ ದುರಂತ:
ಮಕ್ಕಳನ್ನು ನವೋದಯ ಶಾಲೆಗೆ ಸೇರಿಸುವ ವಿಚಾರವಾಗಿ ಜುಲೈ 18ರಂದು ಪ್ರವಳಿಕ ಪತಿಯನ್ನು ಸಂಪರ್ಕಿಸಿದ್ದರು. ಮಕ್ಕಳಿಗೆ ಪುಸ್ತಕಗಳನ್ನು ಕೊಡಿಸಿದ ವಿಜಯಕುಮಾರ್, ಪತ್ನಿಗೆ ಮತ್ತೆ ಸಂಸಾರಕ್ಕೆ ಬರುವಂತೆ ಒತ್ತಾಯಿಸಿದ್ದಾನೆ. ಆದರೆ ಪ್ರವಳಿಕ ಅದಕ್ಕೆ ನಿರಾಕರಿಸಿದ್ದಾರೆ. ಇದರಿಂದ ತೀವ್ರ ಆಕ್ರೋಶಗೊಂಡ ವಿಜಯಕುಮಾರ್, ಜುಲೈ 19ರಂದು ಇಬ್ಬರೂ ಮಕ್ಕಳಿಗೆ ಕೂಲ್ ಡ್ರಿಂಕ್‌ನಲ್ಲಿ ಇಲಿ ಪಾಷಾಣ ಬೆರೆಸಿ ಕುಡಿಸಿ, ತಾನೂ ಕುಡಿದಿದ್ದಾನೆ. ಬಳಿಕ ಮಕ್ಕಳನ್ನು ಕರೆದುಕೊಂಡು ಹೋಗಿ ‘ಸ್ತ್ರೀಶಕ್ತಿ ಸದನ’ದಲ್ಲಿದ್ದ ಪ್ರವಳಿಕ ಬಳಿ ಬಿಟ್ಟು ಬಂದಿದ್ದಾನೆ.
ಚಿಕಿತ್ಸೆ ಫಲಿಸದೇ ಬಾಲಕಿ ಸಾವು:
ಮಕ್ಕಳು ತೀವ್ರ ಅಸ್ವಸ್ಥಗೊಂಡಿರುವುದನ್ನು ಗಮನಿಸಿದ ತಾಯಿ ತಕ್ಷಣವೇ ಅವರನ್ನು ಒಂಗೋಲ್ ರಿಮ್ಸ್ (RIMS) ಆಸ್ಪತ್ರೆಗೆ ದಾಖಲಿಸಿದ್ದಾರೆ. ಆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈನ ಎನ್ನೋರ್ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ, ಚಿಕಿತ್ಸೆ ಫಲಿಸದೇ ಬಾಲಕಿ ಆದ್ಯಾ ಕೊನೆಯುಸಿರೆಳೆದಿದ್ದಾಳೆ. 8 ವರ್ಷದ ಬಾಲಕ ಸುಪ್ರೀತ್ ಪರಿಸ್ಥಿತಿ ಇನ್ನು ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಆರೋಪಿ ತಂದೆಯ ವಿರುದ್ಧ ಪ್ರಕರಣ ದಾಖಲು:
ಇತ್ತ ಮಕ್ಕಳಿಗೆ ವಿಷವುಣಿಸಿ ತಾನೂ ಸೇವಿಸಿದ್ದ ತಂದೆ ವಿಜಯಕುಮಾರ್ ಒಂಗೋಲ್ ಜಿಜಿಎಚ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮಗಳು ಮೃತಪಟ್ಟ ಹಿನ್ನೆಲೆಯಲ್ಲಿ ತಾಯಿ ನೀಡಿದ ದೂರಿನ ಮೇರೆಗೆ ಒಂಗೋಲ್ ತಾಲೂಕು ಪೊಲೀಸರು ವಿಜಯಕುಮಾರ್ ವಿರುದ್ಧ ಕೊಲೆ ಹಾಗೂ ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡು, ಆಸ್ಪತ್ರೆಯಲ್ಲಿಯೇ ಆತನ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.