ದೇವನಹಳ್ಳಿ: ದೇವಸ್ಥಾನಕ್ಕೆ ಕರೆದುಕೊಂಡು ಹೋಗುವ ನೆಪದಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳನ್ನು ನಂಬಿಸಿ ಕರೆದೊಯ್ದು ಬಲವಂತವಾಗಿ ಮದ್ಯಪಾನ ಮಾಡಿಸಿ ಸಾಮೂಹಿಕ ಅತ್ಯಾಚಾರ ಎಸಗಿರುವ ದಾರುಣ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಮಹಿಳೆ ಸೇರಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಜುಲೈ 17ರ ರಾತ್ರಿ ‘ರೇಣುಕಾ’ ಎಂಬ ಮಹಿಳೆ, ದೇವಸ್ಥಾನಕ್ಕೆ ಹೋಗೋಣವೆಂದು ಬಾಲಕಿಯನ್ನು ನಂಬಿಸಿ ಕರೆದುಕೊಂಡು ಬಂದಿದ್ದಳು. ಬಳಿಕ ನವೀನ್ ಹಾಗೂ ವೆಂಕಟರಮಣ ಎಂಬಿಬ್ಬರು ಆಟೋದಲ್ಲಿ ಬಾಲಕಿಯನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ದಿದ್ದಾರೆ.
ಅಲ್ಲಿ ಬಾಲಕಿಗೆ ಬಲವಂತವಾಗಿ ಮದ್ಯಪಾನ ಮಾಡಿಸಿ, ಹಲ್ಲೆ ಮಾಡಿ ಹೆದರಿಸಿದ್ದಾರೆ. ತದನಂತರ ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದಕ್ಕೆ ಕರೆದೊಯ್ದು ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಪ್ರಾಣ ಬೆದರಿಕೆ ಮತ್ತು ತಾಯಿಯ ಸಮಯಪ್ರಜ್ಞೆ
ಮರುದಿನ ಬೆಳಿಗ್ಗೆ ಆರೋಪಿಗಳು ಬಾಲಕಿಯನ್ನು ಆಕೆಯ ಮನೆ ಬಳಿ ಬಿಟ್ಟು, “ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುತ್ತೇವೆ” ಎಂದು ಪ್ರಾಣ ಬೆದರಿಕೆ ಹಾಕಿ ಪರಾರಿಯಾಗಿದ್ದರು. ರಾತ್ರಿಯೆಲ್ಲಾ ಮನೆಗೆ ಬಾರದೆ, ಬೆಳಿಗ್ಗೆ ಅಸ್ವಸ್ಥ ಸ್ಥಿತಿಯಲ್ಲಿ ಮನೆಗೆ ಬಂದ ಮಗಳನ್ನು ಕಂಡು ಅನುಮಾನಗೊಂಡ ತಾಯಿ ವಿಚಾರಿಸಿದಾಗ ಈ ಘೋರ ಕೃತ್ಯ ಬೆಳಕಿಗೆ ಬಂದಿದೆ.
ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ; ಮೂವರ ಬಂಧನ
ಘಟನೆಯಿಂದ ಆಘಾತಕ್ಕೊಳಗಾದ ಕುಟುಂಬಸ್ಥರು ತಕ್ಷಣವೇ ದೇವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ, ಪ್ರಕರಣದ ಪ್ರಮುಖ ಆರೋಪಿಗಳಾದ ನವೀನ್, ವೆಂಕಟರಮಣ ಹಾಗೂ ರೇಣುಕಾ ಎಂಬ ಮೂವರನ್ನೂ ಬಂಧಿಸಿದ್ದಾರೆ.
ಆರೋಪಿಗಳ ವಿರುದ್ಧ ಪೋಕ್ಸೋ (POCSO) ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯ (BNS) ಕಠಿಣ ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ:
ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಈ ಭೀಕರ ಕೃತ್ಯ ಸಮಾಜವನ್ನೇ ತಲೆತಗ್ಗಿಸುವಂತೆ ಮಾಡಿದೆ. ಪರಿಚಿತ ಮಹಿಳೆಯೇ ವಂಚಿಸಿ, ಈ ರೀತಿಯ ದೌರ್ಜನ್ಯಕ್ಕೆ ಸಾಥ್ ನೀಡಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಘೋರ ಕೃತ್ಯ ಎಸಗಿದ ಆರೋಪಿಗಳಿಗೆ ನ್ಯಾಯಾಲಯದಿಂದ ಕಠಿಣ ಶಿಕ್ಷೆಯಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.