ನವದೆಹಲಿ: ಮುಂದಿನ ಮೂರು ವರ್ಷಗಳಲ್ಲಿ ದೇಶದ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ‘ಡೇ ಕೇರ್ ಕ್ಯಾನ್ಸರ್’ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಈ ಪೈಕಿ 2025-26ರಲ್ಲಿಯೇ 200 ಕೇಂದ್ರಗಳು ಆರಂಭವಾಗಲಿವೆ ಎಂದು ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾಗಿದೆ.
ವೈದ್ಯಕೀಯ ಪ್ರವಾಸೋದ್ಯಮ ಮತ್ತು ‘ಹೀಲ್ ಇನ್ ಇಂಡಿಯಾ’ ಕಾರ್ಯಕ್ರಮವನ್ನು ಖಾಸಗಿ ಸಹಭಾಗಿತ್ವದೊಂದಿಗೆ ಉತ್ತೇಜಿಸಲಾಗುವುದು. ಇದಕ್ಕಾಗಿ ಸುಲಭ ವೀಸಾ ನಿಯಮ ಜಾರಿಗೆ ತರಲಾಗುವುದು. ಪಿಎಂ ಜನ ಆರೋಗ್ಯ ಯೋಜನೆ (ಪಿಎಂ-ಜೆಎವೈ) ಅಡಿಯಲ್ಲಿ ‘ಗಿಗ್’ ಕಾರ್ಮಿಕರಿಗೆ ಆರೋಗ್ಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಹೇಳಲಾಗಿದೆ.
ಕ್ಯಾನ್ಸರ್, ಅಪರೂಪದ ಕಾಯಿಲೆಗಳು ಮತ್ತು ತೀವ್ರತರವಾದ ದೀರ್ಘಕಾಲೀನ ರೋಗಗಳಿಂದ ಬಳಲುತ್ತಿರುವ ರೋಗಿಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ, ಮೂಲ ಕಸ್ಟಮ್ಸ್ ಸುಂಕದಿಂದ (ಬಿಸಿಡಿ) ಪೂರ್ಣ ವಿನಾಯಿತಿ ನೀಡಲಾದ ಔಷಧಗಳ ಪಟ್ಟಿಗೆ 36 ಜೀವರಕ್ಷಕ ಔಷಧಗಳನ್ನು ಸೇರಿಸಲಾಗುವುದು. ಆರು ಜೀವರಕ್ಷಕ ಔಷಧಗಳನ್ನು ಶೇ 5ರಷ್ಟು ರಿಯಾಯಿತಿ ಕಸ್ಟಮ್ಸ್ ಸುಂಕ ವಿಧಿಸುವ ಪಟ್ಟಿಗೆ ಸೇರಿಸಲಾಗುವುದು’ ಎಂದು ಸಚಿವರು ಹೇಳಿದ್ದಾರೆ.
‘ಔಷಧ ತಯಾರಿಕಾ ಕಂಪನಿಗಳು ‘ರೋಗಿ ಸಹಾಯ ಕಾರ್ಯಕ್ರಮದಡಿ’ಯಲ್ಲಿ ಉತ್ಪಾದಿಸುವ ನಿರ್ದಿಷ್ಟ ಔಷಧಗಳಿಗೆ ಮೂಲ ಕಸ್ಟಮ್ಸ್ ಸುಂಕದಿಂದ ವಿನಾಯಿತಿ ನೀಡಲಾಗುವುದು, ಆದರೆ ಇಂತಹ ಔಷಧಗಳು ರೋಗಿಗಳಿಗೆ ಉಚಿತವಾಗಿ ಪೂರೈಕೆಯಾಗುತ್ತಿರಬೇಕು. ಈ ಸುಂಕ ವಿನಾಯಿತಿಗೆ ಇನ್ನೂ 37 ಔಷಧಗಳನ್ನು ಮತ್ತು 13 ಹೊಸ ರೋಗಿ ಸಹಾಯ ಕಾರ್ಯಕ್ರಮಗಳನ್ನು ಸೇರ್ಪಡೆಗೊಳಿಸಲಾಗುವುದು’ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.