ಪಾಸ್‌ಪೋರ್ಟ್ ಪರಿಶೀಲನೆ ವೇಳೆ ಪೊಲೀಸರಿಗೆ ಬಾಡಿ ಕ್ಯಾಮೆರಾ ಕಡ್ಡಾಯ. ಲಂಚ ಪಡೆಯುವ ಉದ್ದೇಶದಿಂದ ಅರ್ಜಿದಾರರಿಗೆ ಕಿರುಕುಳ ನೀಡುವಂತಿಲ್ಲ
ಬೆಂಗಳೂರು: ಪಾಸ್‌ಪೋರ್ಟ್ ಪರಿಶೀಲನೆ ವೇಳೆ ಪೊಲೀಸರು ಕಡ್ಡಾಯವಾಗಿ ಬಾಡಿವೋರ್ನ್ ಕ್ಯಾಮೆರಾವನ್ನು ಧರಿಸಿ, ಅರ್ಜಿದಾರರು ನೀಡಿರುವ ಮನೆ ವಿಳಾಸಕ್ಕೆ ಕಡ್ಡಾಯವಾಗಿ ಭೇಟಿ ನೀಡಬೇಕು ಈ ಎಲ್ಲಾ ನಿಗದಿತ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ ಎಂ.ಎ.ಸಲೀಂ ಆದೇಶ ಹೊರಡಿಸಿದ್ದಾರೆ.
ವಿದ್ಯಾಭ್ಯಾಸ, ಬಿಸಿನೆಸ್, ಪ್ರವಾಸ ಸೇರಿ ಹಲವು ಕಾರಣಗಳಿಂದ ವಿದೇಶಕ್ಕೆ ಹೋಗುವವರ ಪಾಸ್‌ಪೋರ್ಟ್ ಪರಿಶೀಲನೆ ವೇಳೆ ಹಲವು ಲೋಪದೋಷ ಕಂಡು ಬಂದಿರುವ ಹಿನ್ನೆಲೆಯಲ್ಲಿ ಈ ನಿಯಮ ಹೊರಡಿಸಲಾಗಿದೆ. ಅಧಿಕಾರಿಗಳು ಹಾಗೂ ಸಿಬ್ಬಂದಿ, ಅರ್ಜಿದಾರರು ನೀಡಿರುವ ವಿಳಾಸಕ್ಕೆ ಕಡ್ಡಾಯವಾಗಿ ಭೇಟಿ ನೀಡಬೇಕು. ನೆರೆ-ಹೊರೆಯವರಿಂದ ಹಾಗೂ ಸ್ಥಳೀಯ ನಿವಾಸಿಗಳಿಂದ ಮಾಹಿತಿ ಸಂಗ್ರಹಿಸಬೇಕು.
ಇನ್ನೂ ಪಾಸ್‌ಪೋರ್ಟ್ ಅರ್ಜಿ ಪರಿಶೀಲನೆ ವೇಳೆ ಸ್ಪಷ್ಟವಾದ ಪುರಾವೆಗಳಿಲ್ಲದೆ ವರದಿ ಸಲ್ಲಿಸುವಂತಿಲ್ಲ. ಅರ್ಜಿದಾರರಿಂದ ಯಾವುದೇ ರೀತಿಯ ಆಮಿಷ ನಿರೀಕ್ಷಿಸುವಂತಿಲ್ಲ. ಅಲ್ಲದೆ, ಲಂಚ ಪಡೆಯುವ ಉದ್ದೇಶದಿಂದ ಕಿರುಕುಳ ನೀಡುವಂತಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.