ಸುದ್ದಿ

ಶಿಕ್ಷಣ ತಜ್ಞ, ಗಾಂಧಿವಾದಿ, ಪಿಇಎಸ್ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಡಾ.ಎಂ.ಆರ್. ದೊರೆಸ್ವಾಮಿ ನಿಧನ

Share It

ಬೆಂಗಳೂರು: ಪಿಇಎಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಡಾ.ಎಂ.ಆ‌ರ್. ದೊರೆಸ್ವಾಮಿ (89) ಬನಶಂಕರಿಯಲ್ಲಿರುವ ತಮ್ಮ ಸ್ವಗೃಹದಲ್ಲಿ ಗುರುವಾರ ಅವರು ನಿಧನರಾಗಿದ್ದಾರೆ. ಪತ್ನಿ, ಇಬ್ಬರು ಮಕ್ಕಳು ಹಾಗೂ 4 ಮೊಮ್ಮಕ್ಕಳನ್ನು ಅಗಲಿದ್ದಾರೆ.

ಶುಕ್ರವಾರ ಮಧ್ಯಾಹ್ನದವರೆಗೆ ಸ್ವ-ಗೃಹದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು, ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾ‌ರ್, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಪ್ರಮುಖ ಗಣ್ಯರ ದೊರೆಸ್ವಾಮಿ ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.

ಶಿಕ್ಷಣ ಸಂಸ್ಥೆ ಕಟ್ಟುವ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ದೊರೆಸ್ವಾಮಿ ಅವರು ಟಬೆಂಗಳೂರಿನ ಗವಿಪುರ ಗುಟ್ಟಹಳ್ಳಿಯಲ್ಲಿ ಕಳೆದ 5 ದಶಕಗಳ ಹಿಂದೆ ಬಾಡಿಗೆ ಕಟ್ಟಡದಲ್ಲಿ 45 ವಿದ್ಯಾರ್ಥಿಗಳೊಂದಿಗೆ ಪಿಯು ಕಾಲೇಜು ಆರಂಭಿಸಿದರು. ನಂತರ ಪೀಪಲ್ಸ್ ಎಜುಕೇಷನ್‌ ಸೊಸೈಟಿ (ಪಿಇಎಸ್) ಎಂಬ ಬ್ರಾಂಡ್ ಮೂಲಕ ದೊಡ್ಡ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ಇತ್ತೀಚಿನ ಕೆಲವು ವರ್ಷಗಳಿಂದ ಪಿಇಎಸ್ ವಿಶ್ವವಿದ್ಯಾಲಯ ಇಂದು ದೇಶ-ವಿದೇಶಗಳಲ್ಲಿ ಮಾನ್ಯತೆ ಪಡೆದು ಹೆಸರಾಗಿದೆ. ಡಾ.ಎಂ.ಆರ್ ದೊರೆಸ್ವಾಮಿ ಪಿಇಎಸ್ ವಿಶ್ವ ವಿದ್ಯಾಲಯದ ಕುಲಪತಿಯಾಗಿದ್ದರು.

ಡಾ.ಎಂ.ಆರ್ ದೊರೆಸ್ವಾಮಿ ಅವರ ಹಿನ್ನೆಲೆ:
ಮೂಲತಃ ಆಂಧ್ರಪ್ರದೇಶ ರಾಜ್ಯದ ಚಿಕ್ಕ ಗ್ರಾಮ ಚಿತ್ತೂರಿನ ರೈತ ಕುಟುಂಬದಿಂದ ಬಂದ ಇವರ ಪೂರ್ಣ ಹೆಸರು ಮೇದರಪಟ್ಲ ರಾಮನಾಯ್ಡು ದೊರೆಸ್ವಾಮಿ

1937 ರಲ್ಲಿ ಜನಿಸಿದ ದೊರೆಸ್ವಾಮಿ ಅವರು ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಪಡೆದು, ಖಾಸಗಿ ಕಾಲೇಜು ಪ್ರಾಚಾರ್ಯರಾಗಿ ಕೆಲಸ ಮಾಡಿ, ನಂತರ ಪಿಇಎಸ್ ಶಿಕ್ಷಣ ಸಂಸ್ಥೆ ಆರಂಭಿಸಿದರು. ಅದನ್ನು ಉತ್ತಮವಾಗಿ ನಿರ್ವಹಣೆ ಮಾಡುತ್ತಾ ಪಿಇಎಸ್ ವಿಶ್ವವಿದ್ಯಾಲಯವನ್ನು ಕಟ್ಟಿ ದೇಶದಲ್ಲೆ ಮಾದರಿ ವಿಶ್ವವಿದ್ಯಾಲಯ ಮಾಡಿದರು.

ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ 2013ರಲ್ಲಿ ದೊರೆಸ್ವಾಮಿ ವಿಧಾನ ಪರಿಷತ್ ಸದಸ್ಯರಾಗಿ ನೇಮಕವಾದರು. ನಂತರ ರಾಜ್ಯ ಸರ್ಕಾರದಲ್ಲಿ ಉನ್ನತ ಶಿಕ್ಷಣಗಳ ಸುಧಾರಣಾ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ರಾಜ್ಯದಲ್ಲಿ ಉನ್ನತ ಶಿಕ್ಷಣದಲ್ಲಿ ತರಬೇಕಾದ ಅಮೂಲಾಗ್ರ ಬದಲಾವಣೆಗಳ ಬಗ್ಗೆಯೂ ರಾಜ್ಯ ಸರ್ಕಾರಕ್ಕೆ ಸಲಹೆ, ಶಿಫಾರಸುಗಳನ್ನು ಮಾಡಿದ್ದರು. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ರಾಜ್ಯದಲ್ಲಿ ಶಾಸಕರು ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಮಾಡುವ ಯೋಜನೆಯ ಜಾರಿಗೆ ತಂದರು.


Share It

You cannot copy content of this page