ಬೆಂಗಳೂರು: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲು ₹2 ಲಕ್ಷ ಲಂಚ ಪಡೆಯುತ್ತಿದ್ದ ಈಶಾನ್ಯ ವಿಭಾಗದ ಎಸಿಪಿ ಮತ್ತು ಎಎಸ್‌ಐ ಅನ್ನು ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಲೋಕಾಯುಕ್ತ ಪೊಲೀಸರ ಬಂಧಿಸಿದ್ದಾರೆ.
ಈಶಾನ್ಯ ವಿಭಾಗದ ಎಸಿಪಿ ಎಸ್.ಆರ್.ತನ್ವಿರ್, ಎಸ್‌ಐ ಕೃಷ್ಣ ಮೂರ್ತಿ ಬಂಧನಕ್ಕೊಳಗಾಗಿರುವ ಅಧಿಕಾರಿಗಳು. ದೂರುದಾರ ಮಧುಸೂದನ್ ನೀಡಿರುವ ದೂರಿನ ಮೇರೆಗೆ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಬಂಧಿತರನ್ನು ಹಾಜರುಪಡಿಸಲಾಗಿದ್ದು, ಏ.8ರವರೆಗೆ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.
ಸಾಫ್ಟ್‌ವೇರ್ ಎಂಜಿನಿಯರ್ ಮಧುಸೂದನ್, ಅದ್ವಿ ಕಂಪನಿಯ ಮುಖ್ಯಸ್ಥರಾಗಿದ್ದಾರೆ. ಕಂಪನಿಯ ವೆಬ್‌ಸೈಟ್ ಹ್ಯಾಕ್ ಮಾಡಿರುವ ದುಷ್ಕರ್ಮಿಗಳು, ತಪ್ಪು ಮಾಹಿತಿಯನ್ನು ಪ್ರಕಟಿಸಿದ್ದರು. ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿ ಕೊಂಡಿದ್ದರೂ ಆರೋಪಿಗಳನ್ನು ಬಂಧಿಸಿರಲಿಲ್ಲ. ಆರೋಪಿಗಳ ಬಂಧನಕೆ ₹4 ಲಕ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ಲಂಚ ನೀಡಲು ಇಷ್ಟವಿಲ್ಲದ ಮಧುಸೂದನ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೂರು ಆಧರಿಸಿ ಕಾರ್ಯಚರಣೆ ಕೈಗೊಂಡ ಪೊಲೀಸರು ₹4 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಲಂಚದ ಹಣದಲ್ಲಿ ಮುಂಗಡವಾಗಿ ₹2 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ಆರೋಪಿಗಳನ್ನು ಲೋಕಾಯುಕ್ತ ಪೊಲೀಸರು ಬಂಧಿಸಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.