ಕಾರವಾರ: ಆಸ್ತಿ ಕಲಹಕ್ಕೆ ತನ್ನ ಮಗಳ ಗಂಡನ ಮನೆಯ ನಾಲ್ವರನ್ನು ಹತ್ಯೆಗೈದಿದ್ದ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಭಟ್ಕಳ ತಾಲ್ಲೂಕು ಹಲ್ಯಾಣಿಯ ವಿನಯ ಭಟ್ಟ (40) ಎಂಬಾತನಿಗೆ ಮರಣ ದಂಡನೆ ಮತ್ತು ಆತನ ತಂದೆ ಶ್ರೀಧರ ಭಟ್ಟ ಎಂಬಾತನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಇಲ್ಲಿನ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಮಂಗಳವಾರ ಆದೇಶಿಸಿದೆ.
2023ರ ಫೆಬ್ರುವರಿ 24ರಂದು ಭಟ್ಕಳ ತಾಲ್ಲೂಕಿನ ಓಣಿಬಾಗಿಲು ಗ್ರಾಮದ ಕೃಷಿಕ ಶಂಭು ಭಟ್ಟ (70), ಅವರ ಪತ್ನಿ ಮಾದೇವಿ (60), ಪುತ್ರ ರಾಘವೇಂದ್ರ ಯಾನೆ ರಾಜು ಭಟ್ (40) ಹಾಗೂ ಸೊಸೆ ಕುಸುಮಾ (35) ಎಂಬುವರನ್ನು ಮಾರಕಾಸ್ತ್ರಗಳಿಂದ ಹತ್ಯೆ ಮಾಡಲಾಗಿತ್ತು. ಹತ್ಯೆಯಾದ ಶಂಭು ಭಟ್ಟ ಹಾಗೂ ಅಪರಾಧಿ ಶ್ರೀಧರ ಭಟ್ಟ ಬೀಗರಾಗಿದ್ದು, ಅಪರಾಧಿಯ ಪುತ್ರಿ ವಿದ್ಯಾ ಭಟ್ಟ ಪಾಲಿನ ಆಸ್ತಿ ಕಲಹದ ವಿಷಯಕ್ಕೆ ಹತ್ಯೆ ನಡೆದಿತ್ತು ಎಂಬುದು ಸಾಬೀತಾಗಿದೆ.
ಶಂಭು ಭಟ್ಟ, ಅವರ ಪುತ್ರ ರಾಜು ಮತ್ತು ಸೊಸೆ ಕುಸುಮಾ ಅವರನ್ನು ಹತ್ಯೆಗೈದ ವಿನಯ ಭಟ್ಟನಿಗೆ ಮರಣ ದಂಡನೆ ಶಿಕ್ಷೆ ಮತ್ತು ಮಾದೇವಿ ಅವರನ್ನು ಹತ್ಯೆಗೈದ ಶ್ರೀಧರ ಭಟ್ಟನಿಗೆ ಜೀವಾವಧಿ ಶಿಕ್ಷೆ ಹಾಗೂ ₹2.10 ಲಕ್ಷ ದಂಡ ವಿಧಿಸಿ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಡಿ.ಎಸ್.ವಿಜಯಕುಮಾರ್ ಅವರು ಆದೇಶಿಸಿದ್ದಾರೆ.
ಈ ಪ್ರಕರಣದ ವಿಚಾರಣೆ ನಡೆಸಿದ್ದ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಹಿರಿಯ ಸರ್ಕಾರಿ ಅಭಿಯೋಜಕಿ ತನುಜಾ ಬಿ.ಹೊಸಪಟ್ಟಣ ವಾದ ಮಂಡಿಸಿದ್ದರು.