ಬೆಂಗಳೂರು: ತರಗತಿಯಲ್ಲಿ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಕನ್ನಡದಲ್ಲಿ ಉತ್ತರಿಸಿದ ರಸಾಯನಶಾಸ್ತ್ರ ಉಪನ್ಯಾಸಕನಿಂದ ರಾಜೀನಾಮೆ ಪತ್ರ ಪಡೆದ ಘಟನೆ ಬೆಂಗಳೂರಿನ ಆರ್ ವಿ ಪಿಯು ಕಾಲೇಜಿನಲ್ಲಿ ನಡೆದಿದೆ.
ರಸಾಯನಶಾಸ್ತ್ರ ಉಪನ್ಯಾಸಕರಾದ ರೂಪೇಶ್ ಎಂಬುವರೆ ತರಗತಿಯಲ್ಲಿ ಕನ್ನಡ ಮಾತನಾಡಿದ್ದಕ್ಕಾಗಿ ರಾಜೀನಾಮೆ ಶಿಕ್ಷೆಗೆ ಒಳಗಾದವರು. ಈ ಘಟನೆಯನ್ನು ಉಪನ್ಯಾಸಕ ರೂಪೇಶ್ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮೂಲಕ ಹಂಚಿಕೊಂಡಿದ್ದರು. ಇದಕ್ಕೆ ತೀವ್ರ ಜನಾಕ್ರೋಶ ವ್ಯಕ್ತವಾಗಿದೆ. ಇದನ್ನು ಮನಗಂಡ ಆರ್ ವಿ ಕಾಲೇಜಿನ ಆಡಳಿತ ಮಂಡಳಿ ಉಪನ್ಯಾಸಕ ರೂಪೇಶ್ ಅವರ ರಾಜೀನಾಮೆ ಪತ್ರವನ್ನು ರದ್ದು ಮಾಡಿದೆ ಅಲ್ಲದೆ ಈ ಅಚಾತುರ್ಯಕ್ಕೆ ಕಾಲೇಜಿನ ಪ್ರಾಂಶುಪಾಲರಿಂದ ಬಹಿರಂಗವಾಗಿ ಕ್ಷಮೆಯಾಚಿಸಿದೆ.
ತರಗತಿಯಲ್ಲಿ ಕನ್ನಡ ಬಳಸಿದ್ದಕ್ಕೆ ಓರ್ವ ವಿದ್ಯಾರ್ಥಿ ನನಗೆ ಕನ್ನಡ ಬರಲ್ಲ, ಇಂಗ್ಲಿಷ್‌ನಲ್ಲಿ ಉತ್ತರಿಸಿ ಎಂದು ಆಕ್ಷೇಪ ವ್ಯಕ್ತಪಡಿಸಿದ್ದ, ನಂತರ ಕಾಲೇಜಿನ ಪ್ರಾಂಶುಪಾಲ ಉಪನ್ಯಾಸಕ ರೂಪೇಶ್ ಅವರಿಂದ ರಾಜೀನಾಮೆ ಪತ್ರ ಪಡೆದಿದ್ದರು. ಈ ಸಂಬಂಧ ಮಧ್ಯಪ್ರವೇಶಿಸಿದ ಕನ್ಬಡಪರ ಹೋರಾಟಗಾರರು ಉಪನ್ಯಾಸಕ ರೂಪೇಶ್ ಅವರ ರಾಜೀನಾಮೆ ಪತ್ರ ರದ್ದು ಮಾಡಿಸುವ ಮೂಲಕ ಘಟನೆಯನ್ನು ಸುಖಾಂತ್ಯಗೊಳಿಸಿದ್ದಾರೆ.