ಮೈಸೂರು: ಮೈಸೂರು ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆಯ “ನನ್ನ ಶಾಲೆ, ನನ್ನ ಜವಾಬ್ದಾರಿ” ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಳೆ ವಿದ್ಯಾರ್ಥಿಗಳು ತಮ್ಮ ಶಾಲೆಗಳಿಗೆ 2 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ವಂತ ಹಣದಿಂದ ₹ 10 ಲಕ್ಷ ರೂಪಾಯಿ ದೇಣಿಗೆ ನೀಡುವ ಮೂಲಕ ಈ ಮಹತ್ವದ ಯೋಜನೆಗೆ ಪ್ರಚಾರ ಕೊಟ್ಟಿದ್ದಾರೆ. ಈ ಯೋಜನೆಯಿಂದ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಹೆಚ್ಚಾಗಿದೆ ಮತ್ತು ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಾಗಿದೆ.
ಸಿಎಂ ಸಿದ್ದರಾಮಯ್ಯ ಅವರು ಮೈಸೂರು ತಾಲೂಕಿನ ಸಿದ್ದರಾಮನಹುಂಡಿ ಮತ್ತು ಕುಪ್ಪೆಗಾಲ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದರು. ಈ ಶಾಲೆಗಳ ಅಭಿವೃದ್ಧಿಗೆ ದೇಣಿಗೆ ಕೊಟ್ಟ ಸಿಎಂ “ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮ ಶಾಲೆಗಳು ಉತ್ತಮವಾಗಿರಲು ಜವಾಬ್ದಾರಿಯನ್ನು ಹೊಂದಿರಬೇಕು” ಎಂದು ಹೇಳಿದ್ದಾರೆ.
ಸಿಎಂ ಅಷ್ಟೇ ಅಲ್ಲದೆ, ವಿದೇಶಗಳಲ್ಲಿರುವವರು, ಉತ್ತಮ ಉದ್ಯೋಗದಲ್ಲಿರುವವರೂ ಸಹ ಶಾಲೆಗಳ ಅಭಿವೃದ್ಧಿಗಾಗಿ ಯೋಜನೆಗೆ ಹಣ ಕೊಟ್ಟಿದ್ದಾರೆ. ಹಳೆ ವಿದ್ಯಾರ್ಥಿಗಳ ಸಂಘದಿಂದ ಶಾಲೆಗಳ ಮೂಲಭೂತ ಸೌಕರ್ಯ ಹೆಚ್ಚಿಸಲು ಈ ಯೋಜನೆ ಸಹಕಾರಿಯಾಗಿದೆ. ಮೈಸೂರಿನ ಸುಮಾರು 2,000 ಶಾಲೆಗಳಲ್ಲಿ ಹಳೆ ವಿದ್ಯಾರ್ಥಿಗಳ ಸಂಘವನ್ನು ರಚಿಸಲಾಗಿದೆ. ಈ ಯೋಜನೆಯಿಂದ ಶಾಲೆಗಳಿಗೆ ಡೆಸ್ಕ್, ಕುರ್ಚಿ, ಕಂಪ್ಯೂಟರ್, ಪ್ರೊಜೆಕ್ಟರ್ ಮತ್ತು ಗ್ರಂಥಾಲಯಗಳನ್ನು ಒದಗಿಸಲಾಗಿದೆ. ಶಾಲಾ ದುರಸ್ತಿ, ಕಾಂಪೌಂಡ್ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ, ಲ್ಯಾಪ್‌ಟಾಪ್ ಮತ್ತು ಬೆಂಚುಗಳನ್ನು ಒದಗಿಸಲಾಗಿದೆ. ಈ ಯೋಜನೆಯಿಂದ ಸರ್ಕಾರಿ ಶಾಲೆಗಳಿಗೆ ಮಕ್ಕಳ ದಾಖಲಾತಿ ಹೆಚ್ಚಾಗಿದೆ ಎನ್ನುತ್ತಾರೆ ಶಿಕ್ಷಣ ಇಲಾಖೆಯ ಅಧಿಕಾರಿಗಳು.