ಬೆಂಗಳೂರು: ಕೋವಿಡ್ ಸಾಂಕ್ರಾಮಿಕ
ರೋಗ ನಿಯಂತ್ರಣಕ್ಕಾಗಿ ರಾಜ್ಯ ಕೋವಿಡ್ ಮರಣ ಪರಿಶೋಧನಾ ತಂಡವನ್ನು ಪುನರ್‌ರಚಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಪ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ಒಟ್ಟು 16 ಮಂದಿಯ ಸಮಿತಿ ರಚಿಸಲಾಗಿದ್ದು, ರಾಜೀವ್ ಗಾಂಧಿ ಎದೆ ರೋಗ ಸಂಸ್ಥೆಯ ಬೆಂಗಳೂರು ನಿರ್ದೇಶಕ ಹಾಗೂ ವೈದ್ಯಕೀಯ ಮಹಾವಿದ್ಯಾಲಯದ ಶ್ವಾಸಕೋಶದ ಔಷಧಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಶಶಿಭೂಷಣ್ ಬಿ.ಎಲ್. ಅವರನ್ನು ಸಮಿತಿಗೆ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ವೈದ್ಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕರೂ ಸೇರಿದಂತೆ 15 ಮಂದಿ ಸಮಿತಿಯ ಸದಸ್ಯರಾಗಿರುತ್ತಾರೆ. ಈ ಸಮಿತಿ, ಕೋವಿಡ್-19 ಮರಣಗಳಿಗೆ ಕಾರಣ, ರೋಗಲಕ್ಷಣಗಳು, ಸಹರೋಗ ಗಳು, ಆಸ್ಪತ್ರೆಗೆ ದಾಖಲಾದ ದಿನಗಳ ವಿಶ್ಲೇಷಣೆ, ದಾಖಲಾತಿ ಮತ್ತು ವರದಿಯಲ್ಲಿನ ವಿಳಂಬ ಮುಂತಾದವುಗಳನ್ನು ಪರಿಶೀಲಿಸಿ ಅಗತ್ಯ ಸೂಚನೆ ಮತ್ತು ಸಲಹೆ ನೀಡಲಿದ್ದಾರೆ. ಅಲ್ಲದೆ, ಸರಕಾರ ಕಾಲಕಾಲಕ್ಕೆ ಹೊರಡಿಸುವ ಮಾರ್ಗಸೂಚಿಗಳನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸುವ ಜವಾಬ್ದಾರಿಯನ್ನು ಈ ತಂಡ ನಿರ್ವಹಿಸಲಿದೆ.