ಬೆಂಗಳೂರು: ಲೋಕಾಯುಕ್ತ ಅಧಿಕಾರಿಗಳ ಹೆಸರಿನಲ್ಲಿ ಸರ್ಕಾರಿ ನೌಕಕರಿಂದ ಹಣ ವಸೂಲಿ ಮಾಡಿದ ಆರೋಪ ಪ್ರಕರಣದಲ್ಲಿ ತನಿಖೆಗೆ ಹಾಜರಾಗುವಂತೆ ಸೂಚಿಸಿ ಐಪಿಎಸ್ ಅಧಿಕಾರಿ ಶ್ರೀನಾಥ್ ಎಂ. ಜೋಶಿ ಅವರಿಗೆ ಜಾರಿ ಮಾಡಿದ್ದ ನೋಟಿಸ್‌ಗೆ ಕರ್ನಾಟಕ ಹೈಕೋರ್ಟ್ ಗುರುವಾರ ತಡೆ ನೀಡಿದೆ.
ತನಿಖೆಗೆ ಹಾಜರಾಗುವಂತೆ ಜೂನ್ 15ರಂದು ಜಾರಿ ಮಾಡಿರುವ ನೋಟಿಸ್‌ಗೆ ತಡೆ ನೀಡುವಂತೆ ಕೋರಿ ಶ್ರೀನಾಥ್ ಎಂ. ಜೋಶಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ನೋಟಿಸ್‌ಗೆ ತಡೆ ನೀಡಲಾಗಿದ್ದು, ಪ್ರಕರಣದಲ್ಲಿ ನಿಂಗಪ್ಪ ಉಲ್ಲೇಖಿಸಿರುವ ಇತರೆ 35 ಅಧಿಕಾರಿಗಳ ವಿರುದ್ಧ ತನಿಖೆ ಮುಂದುವರಿಯಲಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ವಿಚಾರಣೆಯನ್ನು ಜೂನ್ 30ಕ್ಕೆ ಮುಂದೂಡಿದೆ.
ಲೋಕಾಯುಕ್ತ ಪೊಲೀಸ್ ಪರ ವಿಶೇಷ ಸರ್ಕಾರಿ ಅಭಿಯೋಜಕ ವೆಂಕಟೇಶ ಅರಬಟ್ಟಿ ಅವರು “ನಿಂಗಪ್ಪ ಅವರು 35 ಅಧಿಕಾರಿಗಳ ಹೆಸರನ್ನು ಉಲ್ಲೇಖಿಸಿದ್ದು, ಶ್ರೀನಾಥ್ ಜೋಶಿ ಅವರಿಗೆ ನೀಡಿರುವ ನೋಟಿಸ್‌ಗೆ ತಡೆ ನೀಡಿದರೆ ತನಿಖೆಗೆ ಸಮಸ್ಯೆಯಾಗಲಿದೆ. ಹೀಗಾಗಿ, ತನಿಖೆಗೆ ಅನುಮತಿಸಬೇಕು” ಎಂದು ಕೋರಿದರು.
ಜೂನ್ 15ರಂದು ಜೋಶಿ ಅವರ ಮನೆಯಲ್ಲಿ ಶೋಧ ನಡೆಸಿ, ಬಿಎನ್‌ಎಸ್‌ಎಸ್ ಸೆಕ್ಷನ್ 35(ಎ) ನೋಟಿಸ್ ಜಾರಿ ಮಾಡಲಾಗಿದೆ. ಜೂನ್ 16ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದ್ದು, ಕಾರಣವನ್ನು ಬಹಿರಂಗಪಡಿಸಿಲ್ಲ. ನೋಟಿಸ್ ಜೊತೆಗೆ ದೂರು ಅಥವಾ ಎಫ್‌ಐಆರ್ ಲಗತ್ತಿಸಿಲ್ಲ. ಎಫ್‌ಐಆರ್ ಅಥವಾ ದೂರಿನಲ್ಲಿ ಜೋಶಿ ಅವರ ಹೆಸರು ಉಲ್ಲೇಖಿಸಿಲ್ಲ. ನಿಂಗಪ್ಪ ವಿರುದ್ಧ ದೂರು ದಾಖಲಾಗಿರುವುದನ್ನು ತಿಳಿಸದೇ ಜೋಶಿ ಅವರನ್ನು ತನಿಖೆಗೆ ಬರುವಂತೆ ಸೂಚಿಸಿರುವುದು ಲೋಕಾಯುಕ್ತ ಪೊಲೀಸರ ಮೇಲೆ ಗಂಭೀರ ಅನುಮಾನಕ್ಕೆ ಕಾರಣವಾಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.