ಸುದ್ದಿ

ಸುಳ್ಳು ಕೊಲೆ ಪ್ರಕರಣದಲ್ಲಿ ಸಿಲುಕಿಸಿದ ಪೊಲೀಸರು; ₹5 ಕೋಟಿ ಪರಿಹಾರ ಕೋರಿ ಕೋಟ್೯ ಮೆಟ್ಟಿಲೇರಿದ ಸಂತ್ರಸ್ತ

Share It

ಬೆಂಗಳೂರು: ಪತ್ನಿ ಬದುಕಿದ್ದರೂ ಸುಳ್ಳು ಕೊಲೆ ಪ್ರಕರಣದಲ್ಲಿ ತನ್ನನ್ನು ವಿನಾಕಾರಣ ಸಿಲುಕಿಸಿ ಜೈಲು ವಾಸ ಅನುಭವಿಸುವಂತೆ ಮಾಡಿದ ತಪ್ಪಿತಸ್ಥ ಪೊಲೀಸರಿಗೆ ಶಿಕ್ಷೆಯಾಗಬೇಕು, ಘನತೆಗೆ ಹಾನಿ ಮಾಡಿರುವುದಕ್ಕಾಗಿ ₹5 ಕೋಟಿ ಪರಿಹಾರ ನೀಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ವ್ಯಕ್ತಿಯೊಬ್ಬರು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಇನ್ನೂ ವಿಚಾರಣೆಗೆ ಬರಬೇಕಾಗಿದೆ.

ಪತ್ನಿಯ ಶೀಲ ಶಂಕಿಸಿ,ಆಕೆಯ ಮೇಲೆ ದೈಹಿಕ ದೌರ್ಜನ್ಯ ಎಸಗಿದ್ದಲ್ಲದೆ 2020ರ ಅಕ್ಟೋಬರ್ 19ರಂದು  ಕೊಲೆ ಮಾಡಲಾಗಿದೆ ಎಂದು ಆರೋಪಿಸಿ   ಅರ್ಜಿದಾರ ಸುರೇಶ್ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 498ಎ (ಕ್ರೌರ್ಯ), 302 (ಕೊಲೆ) ಮತ್ತು 201 (ಸಾಕ್ಷಿಗಳ ತಿರುಚುವಿಕೆ) ಅಡಿ ನ್ಯಾಯಾಲಯಕ್ಕೆ ಮೈಸೂರಿನ ಬೆಟ್ಟದಪುರ ಪೊಲೀಸರು ಆರೋಪ ಪಟ್ಟಿ ಸಲ್ಲಿಕೆ ಮಾಡಿದ್ದರು.

ಆದರೆ, 2025ರ ಏಪ್ರಿಲ್ 2ರಂದು ಸತ್ರ ನ್ಯಾಯಾಲಯದಲ್ಲಿ ನಡೆದಿದ್ದ ವಿಚಾರಣೆಯಲ್ಲಿ ಪತ್ನಿ ಜೀವಂತವಾಗಿದ್ದು, ಆಕೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಆದೇಶಿಸಬೇಕು ಎಂದು ಅರ್ಜಿದಾರ ಸುರೇಶ್ ಕೋರಿದ್ದರು. ಇದರಂತೆ ಆಕೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಆಕೆ ಮತ್ತು ಆಕೆಯ ತಾಯಿ ಮತ್ತು ಇತರ ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಳ್ಳಲಾಗಿತ್ತು. ಇದರಿಂದ ನ್ಯಾಯಾಲಯವು ಪತ್ನಿ ಜೀವಂತವಾಗಿದ್ದಾಳೆ ಎಂದು ಖಾತರಿಪಡಿಸಿತ್ತು.

ಅಲ್ಲದೆ, ಈ ಪ್ರಕರಣದಲ್ಲಿ ತನಿಖಾಧಿಕಾರಿಗಳ ಪಾತ್ರದ ಕುರಿತು ತನಿಖೆಗೆ ಆದೇಶಿಸಿದ್ದ ಸತ್ರ ನ್ಯಾಯಾಲಯವು ಮೈಸೂರಿನ ಪೊಲೀಸ್ ವರಿಷ್ಠಾಧಿಕಾರಿಗೆ ವರದಿ ಸಲ್ಲಿಸಲು ಆದೇಶಿಸಿತ್ತು. ವರದಿ ಆಧರಿಸಿ, ಸುರೇಶ್ ವಿರುದ್ಧ ನಕಲಿ ಪ್ರಕರಣ ದಾಖಲಿಸಲು ಪೊಲೀಸರು ಕಾರಣ ಎಂದಿದ್ದ ಸತ್ರ ನ್ಯಾಯಾಲಯವು 2025 ಏಪ್ರಿಲ್ 23ರಂದು ಅರ್ಜಿದಾರ ಸುರೇಶ್ ಅನ್ನು ಖುಲಾಸೆಗೊಳಿಸಿ, ₹1 ಲಕ್ಷ ಪರಿಹಾರ ಪಾವತಿಸಲು ಗೃಹ ಇಲಾಖೆಗೆ ಸೂಚಿಸಿತ್ತು.

ತನ್ನದಲ್ಲದ ತಪ್ಪಿಗೆ 1.5 ವರ್ಷ ಜೈಲುವಾಸ ಅನುಭವಿಸಿದ್ದು, ಸಮಾಜದಲ್ಲಿ ಘನತೆ ಕಳೆದುಕೊಂಡಿದ್ದೇನೆ. ಹೀಗಾಗಿ, ₹5 ಕೋಟಿ ಪರಿಹಾರ ಪಾವತಿಸಬೇಕು ಮತ್ತು ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮಕೈಗೊಳ್ಳಬೇಕು. ಸತ್ರ ನ್ಯಾಯಾಲಯದ ತೀರ್ಪಿನಲ್ಲಿ ಆರೋಪಿ ಪದ ತೆಗೆದು, ಸಂತ್ರಸ್ತ ಎಂದು ಸೇರ್ಪಡೆ ಮಾಡಬೇಕು ಎಂದು ಕೋರಿದ್ದಾರೆ.

ಈ ನಡುವೆ, ಪ್ರಕರಣದಲ್ಲಿ ಸಾಕ್ಷಿ ತಿರುಚಿದ್ದಕ್ಕಾಗಿ ಬೆಟ್ಟದಪುರ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್ ಬಿ ಜಿ ಪ್ರಕಾಶ್ ವಿರುದ್ಧ ಪ್ರಕರಣ ದಾಖಲಿಸಲು ಮೈಸೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ಮಡಿಕೇರಿಯ ಕುಶಾಲನಗರದ ಗ್ರಾಮೀಣ ಠಾಣೆಯ ವ್ಯಾಪ್ತಿಗೆ ಬರುವ ಬಸವನಹಳ್ಳಿಯಿಂದ ಪತ್ನಿ ಮಲ್ಲಿಗೆ ನಾಪತ್ತೆಯಾಗಿದ್ದಾರೆ ಎಂದು ಸುರೇಶ್ ದೂರು ನೀಡಿದ್ದರು. ಆದರೆ, ಮಹಿಳೆಯ ಮೂಳೆಗಳ ಪತ್ತೆಯಾಗಿರುವುದನ್ನು ಆಧರಿಸಿ ಬೆಟ್ಟದಪುರ ಠಾಣೆ ಪೊಲೀಸರು ಸುರೇಶ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದರು. ವಂಶವಾಹಿ ವರದಿಯಲ್ಲಿ ಮಲ್ಲಿಗೆಗೂ ಮತ್ತು ಪೊಲೀಸರು ಜಪ್ತಿ ಮಾಡಿದ್ದ ಮೂಳೆಗೂ ಯಾವುದೇ ಸಾಮ್ಯತೆ ಕಂಡುಬಂದಿರಲಿಲ್ಲ. ಮಡಿಕೇರಿಯಲ್ಲಿ ಪರ ಪುರುಷನೊಂದಿಗೆ ರೆಸ್ಟೋರೆಂಟ್‌ನಲ್ಲಿ ತಿಂಡಿ ತಿನ್ನುವಾಗ ಮಲ್ಲಿಗೆ ಜೀವಂತವಾಗಿದ್ದಾಳೆ ಎನ್ನುವ ವಿಚಾರ ಬಹಿರಂಗವಾಗಿತ್ತು.ಇದನ್ನು ಆಧರಿಸಿ, ಕೊಲೆ ಪ್ರಕರಣದಲ್ಲಿ ಸುರೇಶ್‌ರನ್ನು ಖುಲಾಸೆಗೊಳಿಸಿದ್ದ ವಿಚಾರಣಾಧೀನ ನ್ಯಾಯಾಲಯವು ಪೊಲೀಸ್‌ ದಾಖಲೆಯಿಂದ ಸುರೇಶ್ ಹೆಸರು ತೆಗೆಯುವಂತೆ ಬೆಟ್ಟದಪುರ ಪೊಲೀಸರಿಗೆ ನಿರ್ದೇಶಿಸಿತ್ತು. ಅಲ್ಲದೇ, ಸುರೇಶ್‌ಗೆ ಒಂದು ಲಕ್ಷ ರೂಪಾಯಿ ಪರಿಹಾರ ಪಾವತಿಸುವಂತೆ ಗೃಹ ಇಲಾಖೆಗೆ ಆದೇಶಿಸಿತ್ತು.


Share It

You cannot copy content of this page