ಬೆಂಗಳೂರು: ತನ್ನ ಪತ್ನಿಯ ಶೀಲ ಶಂಕಿಸಿ ಕೊಲೆ ಮಾಡಿದ್ದ ಆರೋಪ ಸಾಬೀತಾದ ಕಾರಣ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿ ಸಿಸಿಎಚ್ 72 ಸಿಸಿ ಸಿವಿಲ್ ಕೋರ್ಟ್ ತೀರ್ಪು ನೀಡಿದೆ. ಹೆಗಡೆನಗರದ ನಿವಾಸಿ ನಾರಾಯಣಸ್ವಾಮಿ ಜೀವಾವಧಿ ಶಿಕ್ಷೆಗೆ ಗುರಿಯಾದ ವ್ಯಕ್ತಿ
2013ರ ಮೇ 22ರಂದು ಕ್ರಿಶ್ಚಿಯನ್ ಸಂಪ್ರದಾಯದಂತೆ ಮಮತಾ ಮತ್ತು ನಾರಾಯಣಸ್ವಾಮಿ ಮದುವೆ ಆಗಿದ್ದರು. ಕೆಲಸಕ್ಕೆ ಹೋಗದೆ ಪತಿ ನಾರಾಯಣಸ್ವಾಮಿ ಮನೆಯಲ್ಲಿ ಇದ್ದುಕೊಂಡು ಕ್ಷುಲ್ಲಕ ಕಾರಣಕ್ಕೆ ಜಗಳವಾಡುತ್ತಿದ್ದ. ಅಲ್ಲದೆ, ಶೀಲ ಶಂಕಿಸಿ ಕಿರುಕುಳ ಕೊಡುತ್ತಿದ್ದ.
2016ರಲ್ಲಿ ಇದೇ ವಿಚಾರಕ್ಕೆ ಜಗಳ ತೆಗೆದು ಪತ್ನಿ ಮಮತಾ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿ ನಂತರ ತಾನು ಅದೇ ಚಾಕುವಿನಿಂದ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಗಾಯಾಳುನನ್ನು ಆಸ್ಪತ್ರೆಗೆ ದಾಖಲಿಸಿದ್ದರು.
ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡ ಸಂಪಿಗೆಹಳ್ಳಿ ಪೊಲೀಸರು, ತನಿಖೆ ನಡೆಸಿ ನಾರಾಯಣಸ್ವಾಮಿ ವಿರುದ್ಧ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾ. ಕೆ.ಎಸ್. ಜ್ಯೋತಿ ಶ್ರೀ ಅವರು ನಾರಾಯಣಸ್ವಾಮಿ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ವಕೀಲೆ ಎಚ್.ಆರ್. ಸತ್ಯಾವತಿ ವಾದ ಮಂಡಿಸಿದ್ದರು. ಮೃತ ಮಮತಾ ತಾಯಿಗೆ ಆರೋಪಿ ನಾರಾಯಣಸ್ವಾಮಿ 2 ಲಕ್ಷ ರೂಪಾಯಿ ಪರಿಹಾರವನ್ನು ನೀಡುವಂತೆ ನ್ಯಾಯಪೀಠ ಆದೇಶಿಸಿದೆ.