ಹುಬ್ಬಳ್ಳಿ: ತ್ರಿಭಾಷಾ ಸೂತ್ರವು ವಿವಿಧ ಭಾಷೆಗಳಲ್ಲಿ ಪರಿಣಾಮಕಾರಿಯಾಗಿ ಸಂವಹನ ಮಾಡಲು ಅನುಕೂಲವಾಗಲಿದೆ. ಆದ್ದರಿಂದ ರಾಜ್ಯ ಸರ್ಕಾರ ಈ ಹಿಂದೆ ಇದ್ದಂತೆ ಯಥಾವತ್ತಾಗಿ ತ್ರಿಭಾಷಾ ಸೂತ್ರವನ್ನು ಮುಂದುವರಿಸಬೇಕೆಂದು ಸಭಾಪತಿ ಬಸವರಾಜ ಹೊರಟ್ಟಿ ಆಗ್ರಹಿಸಿದ್ದಾರೆ.
ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಗೆ ಈ ಕುರಿತು ಪತ್ರ ಬರೆದಿದ್ದಾರೆ.
ತ್ರಿಭಾಷಾ ಸೂತ್ರವನ್ನು ದೇಶದಲ್ಲಿ 1961ರಿಂದ ಜಾರಿಗೆ ತರಲಾಗಿದೆ ಎಂದು ತಿಳಿಸಿದ್ದಾರೆ.ದ್ವಿಭಾಷಾ ನೀತಿ ಜಾರಿಗೆ ತಂದಲ್ಲಿ ಭಾಷೆಯ ಜ್ಞಾನದ ಕೊರತೆಯಿಂದಾಗಿ ಸಂವಹನದ ಸಮಸ್ಯೆ ಎದುರಾಗುತ್ತದೆ. ತ್ರಿಭಾಷಾ ಕಲಿಕೆಯಿಂದ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವೇ ಹೊರತು ಯಾವುದೇ ತರಹದ ಅನಾನುಕೂಲವಿಲ್ಲ ಎಂಬುವುದು ಭಾಷಾ ತಜ್ಞರ ಅಭಿಪ್ರಾಯವಾಗಿದೆ ಎಂದು ತಿಳಿಸಿದ್ದಾರೆ.
ಸಂವಿಧಾನ ಪೀಠಿಕೆಯಲ್ಲಿರುವಂತೆ ಭ್ರಾತೃತ್ವ ಹಾಗೂ ಭಾಷಾ ವೈವಿಧ್ಯವನ್ನು ತ್ರಿಭಾಷಾ ಸೂತ್ರವು ಗೌರವಿಸುತ್ತದೆ ಮತ್ತು ಸಂರಕ್ಷಿಸುತ್ತದೆ. ಹಿಂದಿ ಭಾಷೆ ಜ್ಞಾನದ ಕೊರತೆಯಿಂದಾಗಿ ನಮ್ಮ ಸಂಸದರಿಗೆ ಭಾಷೆಯ ತೊಂದರೆ ಆಗುತ್ತಿದೆ. ಸರ್ಕಾರಿ, ಅನುದಾನಿತ ಪ್ರೌಢಶಾಲೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ 15 ಸಾವಿರ ಶಿಕ್ಷಕರ ಗತಿ ಏನು? ಹಿಂದಿ ಶಿಕ್ಷಕರು ಕಡಿಮೆ ವೇತನದಲ್ಲಿ ತಮ್ಮ ಜೀವನ ನಡೆಸುತ್ತಿದ್ದು, ಅವರ ಜೀವನ ಬೀದಿಗೆ ಬರುವಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.