ಸುದ್ದಿ

ಕೊಲೆ ಪ್ರಕರಣ: ದರ್ಶನ್ ಗೆ ಜಾಮೀನು ನೀಡುವಾಗ ಹೈಕೋರ್ಟ್ ವಿವೇಚನೆ ಬಳಸಿಲ್ಲ: ಸುಪ್ರೀಂಕೋರ್ಟ್

Share It

ನವದೆಹಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ತಂಡಕ್ಕೆ ಜಾಮೀನು ನೀಡುವ ವೇಳೆ ಕರ್ನಾಟಕ ಹೈಕೋರ್ಟ್‌ ಸೂಕ್ತ ವಿವೇಚನೆಯನ್ನು ಬಳಸಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ಆಕ್ಷೇಪಿಸಿದೆ.

ನಟ ದರ್ಶನ್ ಅವರಿಗೆ ಹೈಕೋರ್ಟ್ ಜಾಮೀನು ನೀಡಿರುವ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರವು ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಜೆ.ಬಿ ಪರ್ದೀವಾಲಾ ಅವರ ಪೀಠ ಈ ಮೇಲಿನಂತೆ ಅಭಿಪ್ರಾಯಪಟ್ಟಿದೆ.

ಕರ್ನಾಟಕ ಸರಕಾರದ ಮೇಲ್ಮನವಿಯ ವಿಚಾರಣೆ ವೇಳೆ ದರ್ಶನ್ ಪರ ಹಾಜರಾಗಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಅವರನ್ನು ಈ ವಿಚಾರವಾಗಿ ನೀವು ಏನು ಹೇಳುತ್ತೀರಿ? ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದರು. ಮುಂದುವರೆದು, “ಪ್ರಾಮಾಣಿಕವಾಗಿ ಹೇಳಬೇಕೆಂದರೆ ಹೈಕೋರ್ಟ್ ಸೂಕ್ತ ರೀತಿಯಲ್ಲಿ ತನ್ನ ವಿವೇಚನೆಯನ್ನು ಬಳಸಿಲ್ಲ” ಎಂದು ನ್ಯಾಯಮೂರ್ತಿ ಪರ್ದಿವಾಲಾ ಅವರು ಹೇಳಿದರು.

ಈ ವೇಳೆ ಪ್ರತಿಕ್ರಿಯಿಸಿದ ಸಿಬಲ್‌ ಅವರು, ಹೈಕೋರ್ಟ್ ಏನು ಮಾಡಿದೆ ಎನ್ನುವುದಿರಲಿ, ದಯಮಾಡಿ ಸಾಕ್ಷ್ಯವನ್ನೊಮ್ಮೆ ಗಮನಿಸಿ, ಸೆಕ್ಷನ್ 161 ಮತ್ತು 164ರ ಅಡಿ ದಾಖಲಿಸಿರುವ ಹೇಳಿಕೆಗಳನ್ನು ಗಮನಿಸಿ ಎಂದು ನ್ಯಾಯಾಲಯದ ಗಮನ ಸೆಳೆಯುವ ಪ್ರಯತ್ನ ಮಾಡಿದರು.

ನ್ಯಾ. ಪರ್ದಿವಾಲಾ ಅವರು, ನಿಮ್ಮ ವಾದವನ್ನು ಮಂಗಳವಾರ ಆಲಿಸಲಿದ್ದೇವೆ. ವಾದವನ್ನು ಸಿದ್ಧಪಡಿಸಿಕೊಂಡಿರಿ. ನಾವು ಏಕೆ ಮಧ್ಯಪ್ರವೇಶಿಸಬಾರದು ಎನ್ನುವ ನಿಮ್ಮ ವಾದವನ್ನು ಅಂದು ಆಲಿಸಲಿದ್ದೇವೆ ಎಂದು ಹೇಳಿದರು.
ಅಂತಿಮವಾಗಿ ಪೀಠವು, ಪ್ರಕರಣವನ್ನು ಜುಲೈ 22ರಂದು ಅಂತಿಮ ವಿಲೇವಾರಿಗೆ ಪಟ್ಟಿ ಮಾಡಿತು.


Share It

You cannot copy content of this page