ಬೆಂಗಳೂರು: ರಾಜ್ಯ ಉನ್ನತ ಶಿಕ್ಷಣ ಇಲಾಖೆಯು ತನ್ನ ವ್ಯಾಪ್ತಿಯ ಎಲ್ಲ ಸರ್ಕಾರಿ, ಖಾಸಗಿ ವಿಶ್ವ ವಿದ್ಯಾಲಯಗಳು ಹಾಗೂ ಅನುದಾನಿತ ಪದವಿ ಹಾಗೂ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಸಿಸಿಟಿವಿ ಅಳವಡಿಕೆ ಕಡ್ಡಾಯಗೊಳಿಸಿ ಸುತ್ತೋಲೆ ಹೊರಡಿಸಿದೆ.
ಈಗಾಗಲೇ ರಾಜ್ಯದ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸಿಸಿಟಿವಿ ಅಳವಡಿಕೆ ಕಡ್ಡಾಯ ಮಾಡಿದ್ದ ಇಲಾಖೆ ಇದನ್ನು ಇದೀಗ ಪದವಿ, ಪಾಲಿಟೆಕ್ನಿಕ್ ಕಾಲೇಜು ಗಳಿಗೂ ವಿಸ್ತರಿಸಿದೆ. ರಾಜ್ಯದ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಮಾದಕ ದ್ರವ್ಯಗಳ ವ್ಯಸನ, ರ್ರಾಗಿಂಗ್ ಹಾಗೂ ಲೈಂಗಿಕ ದೌರ್ಜನ್ಯ ಸೇರಿ ಇನ್ನಿತರ ಅಕ್ರಮ, ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುವುದು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಇದರ ನಿಯಂತ್ರಣಕ್ಕೆ ಸಿಸಿಟಿವಿ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ.
ವಿವಿಗಳು ಹಾಗೂ ಕಾಲೇಜುಗಳ ಪ್ರಾಂಶುಪಾಲರು ಸಿಸಿಟಿವಿ ಅಳವಡಿಕೆ ಬಗ್ಗೆ ಕ್ರಮ ಕೈಗೊಳ್ಳಬೇಕು. ಈಗಾಗಲೇ ಸಿಸಿಟಿವಿ ಅಳವಡಿಕೆ ಆಗಿರುವ ಕಾಲೇಜುಗಳಲ್ಲಿ ಅವುಗಳ ಕಾರ್ಯನಿರ್ವಹಿಸುತ್ತಿರುವ ವಿವರಗಳನ್ನು ಜು.21ರೊಳಗೆ ಮಾಹಿತಿ ಒದಗಿಸುವಂತೆ ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕರು ಸೂಚಿಸಿದ್ದಾರೆ.