ಸುದ್ದಿ

ಧರ್ಮಸ್ಥಳ ಸಾವು ಪ್ರಕರಣ: ತನಿಖೆಗೆ SIT ರಚಿಸುವಂತೆ ನಿವೃತ್ತ ನ್ಯಾ.ಗೋಪಾಲಗೌಡ ಒತ್ತಾಯ

Share It

ಬೆಂಗಳೂರು: ಧರ್ಮಸ್ಥಳ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ ಅತ್ಯಾಚಾರ, ಅಸಹಜ ಸಾವು ಪ್ರಕರಣಗಳಲ್ಲಿ ಸಾಕ್ಷಿ ಫಿರ್ಯಾದಿಗೆ ರಾಜ್ಯ ಸರ್ಕಾರವು ತಕ್ಷಣವೇ ಭದ್ರತೆ ಒದಗಿಸಬೇಕು. ಆರೋಪಗಳ ತನಿಖೆಗೆ ವಿಶೇಷ ತನಿಖಾ ತಂಡ (SIT) ರಚಿಸಬೇಕು ಎಂದು ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಅವರು ಒತ್ತಾಯಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ವಿ. ಗೋಪಾಲಗೌಡ ಅವರು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದ ನಂತರವು ತನಿಖೆ ಸರಿಯಾಗಿ ಆಗುತ್ತಿಲ್ಲ. ಶವಗಳನ್ನು ಎಲ್ಲಿ ಹೂಳಲಾಗಿದೆ ಎಂಬುದನ್ನು ಕಾಲಿ ಹಾಳೆಯಲ್ಲಿ ಗುರುತು ಮಾಡಿಕೊಡು ಎಂದು ಪೊಲೀಸರು ಸಾಕ್ಷಿ ಫಿರ್ಯಾದಿಯ ಮೇಲೆ ಒತ್ತಡ ಹೇರುತ್ತಿದ್ದಾರೆ. ಆತ ನೀಡಿರುವ ಹೇಳಿಕೆಗಳು ಸೋರಿಕೆಯಾಗುತ್ತಿವೆ’ ಎಂದು ಕಳವಳ ವ್ಯಕ್ತಪಡಿಸಿದರು.

ಸಾಕ್ಷಿ ಫಿರ್ಯಾದಿಯು ತನ್ನ ವಕೀಲರೊಂದಿಗೆ ಒಂದು ಸ್ಥಳಕ್ಕೆ ತೆರಳಿ, ಕಳೇಬರವನ್ನು ತೆಗೆಯುವುದಾಗಿ ನ್ಯಾಯಾಲಯ ಮತ್ತು ಪೊಲೀಸರಿಗೆ ಮಾಹಿತಿ ನೀಡಿರುತ್ತಾರೆ. ಹೀಗಿದ್ದೂ ಪೊಲೀಸರು ಸ್ಥಳಕ್ಕೆ ತೆರಳಿಲ್ಲ. ಆತನ ಹೇಳಿಕೆ ದಾಖಲಿಸುವ ತನಿಖಾಧಿಕಾರಿಯು ಯಾರಿಗೋ ಕರೆ ಮಾಡಿ, ಅವರ ಸೂಚಿಸಿದಂತೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಹೀಗಾಗಿ ತಕ್ಷಣವೇ ತನಿಖಾ ತಂಡವನ್ನು ಬದಲಿಸಬೇಕು. ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ನ ಹಾಲಿ ಅಥವಾ ನಿವೃತ್ತ ನ್ಯಾಯಮೂರ್ತಿಯ ಮೇಲ್ವಿಚಾರಣೆಯಲ್ಲಿ ಎಸ್‌ಐಟಿ ರಚಿಸಬೇಕು’ ಎಂದು ಒತ್ತಾಯಿಸಿದರು.


Share It

You cannot copy content of this page