ಬೆಂಗಳೂರು: ಪ್ರಕರಣವೊಂದರಲ್ಲಿ ಬಿ ರಿಪೋರ್ಟ್ ಸಲ್ಲಿಸಲು ಲಂಚದ ರೂಪದಲ್ಲಿ ₹1.25 ಲಕ್ಷ ರೂ. ಹಣವನ್ನು ಪಡೆಯುತ್ತಿದ್ದ ವೇಳೆ ಮಹಿಳಾ ಪಿಎಸ್‌ಐ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಗೋವಿಂದರಾಜಪುರ ಠಾಣೆಯ ಪಿಎಸ್ಐ ಸಾವಿತ್ರಿ ಬಾಯಿ ಬಂಧಿತರು. ಎಚ್ ಬಿಆರ್ ಲೇಔಟ್ ನಿವಾಸಿ, ದೂರುದಾರ ಮೊಹಮ್ಮದ್ ಯೂನಸ್ ಎಂಬುವವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡು ಸೋಮವಾರ ಲಂಚ ಸ್ವೀಕರಿಸುವಾಗ ಪಿಎಸ್‌ಐಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಪ್ರಕರಣ?: ದೂರುದಾರ ಮೊಹಮ್ಮದ್
ಯೂನಸ್ ಯುವತಿಯೊಬ್ಬಳನ್ನು ಪ್ರೀತಿಸಿದ್ದು, ಇಬ್ಬರು 4 ವರ್ಷ ಒಂದೇ ಮನೆಯಲ್ಲಿ ಸಹಜೀವನ ನಡೆಸುತ್ತಿದ್ದರು. ಕೆಲ ದಿನಗಳ ಬಳಿಕ ಮೊಹಮ್ಮದ್‌ಗೆ ಬೇರೊಂದು ಯುವತಿ ಜತೆಗೆ ಈ ಮೊದಲೇ ಮದುವೆಯಾಗಿರುವ ವಿಚಾರ ಯುವತಿಗೆ ಗೊತ್ತಾಗಿದೆ. ಈ ಬಗ್ಗೆ ಪ್ರಶ್ನಿಸಿದಾಗ ಗಲಾಟೆ ಮಾಡಿ ಯುವತಿಗೆ ಹಲ್ಲೆ ಮಾಡಿದ್ದ. ಈ ಸಂಬಂಧ ಯುವತಿ ಮೊಹಮ್ಮದ್ ಯೂನಸ್ ವಿರುದ್ಧ ಕೆ.ಜಿ.ಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಮೊಹಮ್ಮದ್ ದೂರನ್ನು ಹಿಂಪಡೆಯುವಂತೆ ಒತ್ತಾಯಿಸಿ ಆಕೆಯನ್ನು ಅವಾಚ್ಯ ಪದಗಳಿಂದ ನಿಂದಿಸಿ ಗಂಭೀರವಾದ ಹಲ್ಲೆ ಮಾಡಿದ್ದಾನೆ. ಈ ಸಂಬಂಧ ಯುವತಿ ಗೋವಿಂದಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಈ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.
ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್ ಸಲ್ಲಿಸಲು ಮಹಿಳಾ ಪಿಎಸ್‌ಐ ಸಾವಿತ್ರಿ ಬಾಯಿ 1.25 ಲಕ್ಷ ಲಂಚಕ್ಕೆ ಬೇಡಿಕೆ ಇರಿಸಿದ್ದರು. ಈ ಸಂಬಂಧ ಮೊಹಮ್ಮದ್ ಯೂನಸ್ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ಸೋಮವಾರ ಲಂಚ ಸ್ವೀಕರಿಸುವಾಗ ದಾಳಿ ನಡೆಸಿ ಹಣದ ಸಮೇತ ಮಹಿಳಾ ಪಿಎಸ್‌ಐ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದು, ತನಿಖೆ ವತಿ ಮುಂದುವರೆದಿದೆ.