ಬೆಂಗಳೂರು: 50 ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇ.ಡಿ) ಮಾಜಿ ಅಧಿಕಾರಿ ಲಲಿತ್ ಬಜಾದ್ ಅವರಿಗೆ ಮೂರು ವರ್ಷ ಜೈಲು ಶಿಕ್ಷೆ, 15 ಲಕ್ಷ ದಂಡ ವಿಧಿಸಿ ಸಿಬಿಐ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಲಲಿತ್ ಬಜಾದ್ ಅವರು ಜಾರಿ ನಿರ್ದೇಶನಾಲಯದ ಅಧಿಕಾರಿಯಾಗಿ ಬೆಂಗಳೂರು ವಿಭಾಗದಲ್ಲಿ ನೇಮಕವಾಗಿದ್ದಾಗ ದೂರುದಾರರನ್ನು ಪ್ರಕರಣದಿಂದ ಕೈಬಿಡಬೇಕಾದರೆ 50 ಲಕ್ಷ ರು. ಲಂಚ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ 5 ಲಕ್ಷ ರು. ಲಂಚ ಪಡೆದಿದ್ದರು ಎಂಬುದು ಸಾಕ್ಷ್ಯಾಧಾರಗಳಿಂದ ಸಾಬೀತಾಗಿದೆ ಎಂದು ಸಿಬಿಐ ವಿಶೇಷ ನ್ಯಾಯಾಲಯ ನ್ಯಾಯಾಧೀಶ ಮಂಜುನಾಥ್ ಸಂಗ್ರೇಶಿ ತಿಳಿಸಿದ್ದಾರೆ.
ಆರೋಪಿ ಲಲಿತ್ ಬಜಾದ್ ಅವರು ಎಸಗಿದ ಅಪರಾಧಕ್ಕಾಗಿ 1938ರ ಭ್ರಷ್ಟಾಚಾರ ತಡೆ ಕಾಯಿದೆಯ ಸೆಕ್ಷನ್ 7ರ ಲಂಚ ಅಡಿಯಲ್ಲಿ 3 ವರ್ಷಗಳ ಅವಧಿಗೆ ಸಾದಾ ಜೈಲು ಶಿಕ್ಷೆ ಮತ್ತು 5 ಲಕ್ಷ ರು. ದಂಡ ವಿಧಿಸಲಾಗುತ್ತಿದೆ. ದಂಡ ಪಾವತಿಸಲು ವಿಫಲವಾದರೆ, ಅವರು ಇನ್ನೂ 6 ತಿಂಗಳ ಕಾಲಾ ಸಾದಾ ಸಜೆ ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಇದಲ್ಲದೆ ಆರೋಪಿಗೆ ಐಪಿಸಿ ಸೆಕ್ಷನ್ 384ರ ಸುಲಿಗೆ ಅಡಿ 1 ವರ್ಷದ ಅವಧಿಗೆ ಸಾದಾ ಜೈಲು ಶಿಕ್ಷೆ ಮತ್ತು 50 ಸಾವಿರ ರು. ದಂಡ ಪಾವತಿಸಬೇಕು. ದಂಡ ಪಾವತಿಸದೆ ಹೋದಲ್ಲಿ ಅವರು ಇನ್ನೂ 1 ತಿಂಗಳ ಅವಧಿಗೆ ಸಾದಾ ಸೆರೆವಾಸ ಅನುಭವಿಸಬೇಕಾಗುತ್ತದೆ ಎಂದು ಕೋಟ್೯ ಹೇಳಿದೆ.
ಏನಿದು ಪ್ರಕರಣ?: ಲಲಿತ್ ಬಜಾದ್ ಜಾರಿ ನಿರ್ದೇಶನಾಲಯದ ಅಧಿಕಾರಿಯಾಗಿ ಬೆಂಗಳೂರು ವಿಭಾಗದಲ್ಲಿ ನೇಮಕ ಮಾಡಿದ್ದಾಗ ಬಜಾದ್ ಅವರು ದೂರುದಾರ ಆಗಿದ್ದ ಅಪೊಲೊ ಫಿನ್ನೆಸ್ಟ್ ಎಂಬ ಕಂಪನಿಯ ಮಾಲೀಕರನ್ನು ಪ್ರಕರಣವೊಂದರಿಂದ ಕೈಬಿಡಲು 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಆರೋಪಕ್ಕೆ ಸಂಬಂಧಿಸಿದಂತೆ ಬಜಾದ್ ಅವರನ್ನು ಜೂನ್ 2021ರಲ್ಲಿ ಸಿಬಿಐ ಬಂಧಿಸಿತ್ತು. ಆರೋಪ ಸಾಬೀತಾದ ಕಾರಣ ಸಿಬಿಐ ವಿಶೇಷ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.