ಬೆಂಗಳೂರು: ಮುಡಾ ಅಕ್ರಮ ನಿವೇಶನ ಹಂಚಿಕೆ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬದ ಪಾತ್ರವಿಲ್ಲ, ಪರ್ಯಾಯ ನಿವೇಶನ ಪಡೆಯಲು ಪ್ರಭಾವ ಬೀರಿದ್ದಾರೆ ಎಂಬುದಕ್ಕೆ ಯಾವುದೇ ಸೂಕ್ತ ಪುರಾವೆ ಇಲ್ಲ ಎಂದು ಹೈಕೋರ್ಟ್ ನಿವೃತ್ತ ನ್ಯಾ. ಪಿ. ಎನ್. ದೇಸಾಯಿ ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗ ವರದಿಯಲ್ಲಿ ಹೇಳಿದೆ. ವಿಧಾನಸೌಧದಲ್ಲಿ ಗುರುವಾರ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ 6 ಸಂಪುಟಗಳ ವರದಿ ಸಲ್ಲಿಸಿದೆ.
ಇತ್ತೀಚೆಗೆ ಸುಪ್ರೀಂ ಕೋರ್ಟ್ ಮುಡಾ ಹಗರಣದಲ್ಲಿ ಜಾರಿ ನಿರ್ದೇಶನಾಲಯದ ಕೆಲಸವೇನು ಎಂದು ಪ್ರಶ್ನೆ ಮಾಡಿತ್ತು. ಇದೀಗ ಪಿ.ಎನ್. ದೇಸಾಯಿ ಆಯೋಗ ತನ್ನ ವರದಿಯಲ್ಲಿ ಸಿದ್ದರಾಮಯ್ಯ ಅಧಿಕಾರ ದುರ್ಬಳಕ್ಕೆ ಸಂಬಂಧ ಸೂಕ್ತ ಪುರಾವೆ ಇಲ್ಲ. ಅವರ ಪತ್ನಿ ಪಾರ್ವತಿ ಇಂತಹದ್ದೇ ಜಾಗದಲ್ಲಿ ಪರ್ಯಾಯ ಸೈಟ್ ಕೊಡಿ ಎಂಬ ಅರ್ಜಿ ಪ್ರಸ್ತಾಪ ಮಾಡಿಲ್ಲ.ಸೈಟ್ ಹಂಚಿಕೆ ವೇಳೆ ಮೈಸೂರು ತಾಲೂಕು ಹಿಂದಿನ ನಿವೃತ್ತ ತಹಸೀಲ್ದಾರ್, ನಿವೃತ್ತ ರೆವಿನ್ಯೂ ಇನ್‌ಸ್ಪೆಕ್ಟರ್, ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಸಿಬ್ಬಂದಿ ಲೋಪ ಎಸಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.