ಮುಂಬೈ: ವಿಚ್ಛೇದನ ಕಾನೂನು ಪ್ರಕ್ರಿಯೆ ವೇಳೆ ಪತಿಯ ವಿರುದ್ಧ ಪತ್ನಿ ಮಾಡುವ ಲೈಂಗಿಕ ದೌರ್ಬಲ್ಯ ಆರೋಪಗಳು ಮಾನಹಾನಿಗೆ ಕಾರಣವಾಗುವುದಿಲ್ಲ, ಬದಲಾಗಿ ಪತ್ನಿಯ ಹಿತಾಸಕ್ತಿಗಳನ್ನು ರಕ್ಷಿಸಲು ಅದು ಕಾನೂನು ಪ್ರಕ್ರಿಯೆಯ ಅಗತ್ಯ ಭಾಗವಾಗಿದೆ ಎಂದೇ ಭಾವಿಸಬೇಕಾಗುತ್ತದೆ ಎಂದು ಹೇಳಿರುವ ಬಾಂಬೆ ಹೈಕೋರ್ಟ್ ತೀರ್ಪು ನೀಡಿದೆ. ಪತ್ನಿ ಮತ್ತು ಆಕೆಯ ಕುಟುಂಬದ ವಿರುದ್ಧ ಪತಿ ಮಾಡಿದ್ದ ಮಾನನಷ್ಟ ದೂರನು ವಜಾಗೊಳಿಸಿದೆ.
ವೈವಾಹಿಕ ಜೀವನ ವಿಚ್ಛೇದನದ ಹಂತಕ್ಕೆ ಬಂದಾಗ, ಪತ್ನಿ ತನ್ನ ಹಿತಾಸಕ್ತಿಯನ್ನು ಕಾಪಾಡಲು ಪತಿಯ ವಿರುದ್ಧ ಲೈಂಗಿಕ ದೌರ್ಬಲ್ಯ ಆರೋಪ ಮಾಡುವುದು ತನ್ನ ಹಿತಾಸಕ್ತಿ ಕಾಪಾಡಲು ಮಹಿಳೆಗೆ ಮುಖ್ಯವಾಗುತ್ತದೆ ಎಂದು ನ್ಯಾಯಾಲಯ ಭಾವಿಸುತ್ತದೆ ಮತ್ತು ಇದನ್ನು ಮಾನನಷ್ಟವೆಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಮೂರ್ತಿ ಎಸ್.ಎಂ. ಮೋದಕ್ ಹೇಳಿದ್ದಾರೆ.
ವಿಚ್ಛೇದನ ಮತ್ತು ಜೀವನಾಂಶ ಅರ್ಜಿಗಳಲ್ಲಿ ಮತ್ತು ಪ್ರತ್ಯೇಕ ಎಫ್‌ಐಆರ್‌ನಲ್ಲಿ ತನ್ನ ಪತ್ನಿ ಮಾಡಿದ ಆಪಾದನೆಗಳು ಸಾರ್ವಜನಿಕ ದಾಖಲೆಯ ಭಾಗವಾಗಿವೆ, ಇದರಿಂದ ನನ್ನ ಮಾನಹಾನಿಯಾಗಿದೆ ಎಂದು ಪತಿ ಅರ್ಜಿಯಲ್ಲಿ ಆರೋಪಿಸಿದ್ದರು.
ಮಾನನಷ್ಟ ತನಿಖೆ ನಡೆಸುವಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ನಿರ್ದೇಶನ ನೀಡಿ, ಸೆಷನ್ಸ್ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸುವಂತೆ ಕೋರಿದ್ದರು.