ಲಿವ್-ಇನ್ ಸಂಬಂಧಗಳು ಪಾಶ್ಚಿಮಾತ್ಯ ಸಂಸ್ಕೃತಿಯಿಂದ ಎರವಲಾಗಿದ್ದು ಇವು ಭಾರತೀಯ ಸಂಸ್ಕೃತಿಗೆ ಕಳಂಕ ಮತ್ತು ನಂಬಿಕೆಗಳಿಗೆ ವಿರುದ್ಧವಾಗಿವೆ ಎಂದು ಹೇಳಿರುವ ಛತ್ತೀಸಗಢ ಹೈಕೋರ್ಟ್, ಪ್ರಸ್ತುತ ಸಾಂಪ್ರದಾಯಿಕ ಮದುವೆಗಳು ಜನರನ್ನು ಈ ಹಿಂದಿನಷ್ಟು ಪ್ರಮಾಣದಲ್ಲಿ ಪ್ರಭಾವಿಸುತ್ತಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
36 ವರ್ಷ ವಯಸ್ಸಿನ ಮಹಿಳೆಯೊಬ್ಬರ ಜೊತೆಗಿನ ಲಿವ್- ಇನ್ ಸಂಬಂಧದಲ್ಲಿ ಜನಿಸಿದ ಮಗುವನ್ನು ತನ್ನ ಸುಪರ್ದಿಗೆ ನೀಡಬೇಕು ಎಂದು ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಗೌತಮ್ ಭಾದುರಿ ಮತ್ತು ಸಂಜಯ್ ಎಸ್. ಅಗರ್ವಾಲ್ ಅವರ ನ್ಯಾಯಪೀಠ ಈ ಮೇಲಿನಂತೆ ಅಭಿಪ್ರಾಯಪಟ್ಟಿದ್ದು ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿದೆ.
ದಾಂತೇವಾಡ ಜಿಲ್ಲೆಯ ಅಬ್ದುಲ್ ಹಮೀದ್ ಸಿದ್ದಿಕಿ ಎನ್ನುವವರು ತಾವು ಬೇರೊಂದು ಧರ್ಮದ ಮಹಿಳೆಯೊಬ್ಬರ ಜೊತೆ ಲಿವ್-ಇನ್ ಸಂಬಂಧ ಹೊಂದಿದ್ದಾಗಿ, ಆ ಮಹಿಳೆಯು ಮಗುವಿಗೆ ಜನ್ಮ ನೀಡಿದ್ದಾಗಿ ತಿಳಿಸಿದ್ದರು. ಮಗುವನ್ನು ತಮ್ಮ ಸುಪರ್ದಿಗೆ ನೀಡಬೇಕು ಎಂದು ಸಿದ್ದಿಕಿ ಸಲ್ಲಿಸಿದ್ದ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯವು ತಿರಸ್ಕರಿಸಿದ ನಂತರ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಆಕೆಯ ಮತವನ್ನು ಬದಲಾಯಿಸದೆಯೇ ತಾನು ಆಕೆಯನ್ನು 2021ರಲ್ಲಿ ಮದುವೆ ಆಗಿದ್ದಾಗಿ ಸಿದ್ದಿಕಿ ತಿಳಿಸಿದ್ದರು. 2021ರಲ್ಲಿ ಮಗು ಜನಿಸಿತು. ಆದರೆ 2023ರಲ್ಲಿ ತಾಯಿ ಮತ್ತು ಮಗು ಕಾಣೆಯಾದರು. ಆಗ ಸಿದ್ದಿಕಿ ಅವರು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ತಾನು ತನ್ನ ತಾಯಿಯ ಜೊತೆ ವಾಸಿಸುತ್ತಿರುವುದಾಗಿ ಆ ಮಹಿಳೆ ಹೈಕೋರ್ಟ್‌ಗೆ ತಿಳಿಸಿದ್ದರು. ಸಿದ್ದಿಕಿ ಅವರಿಗೆ ಅದಾಗಲೇ ಮದುವೆ ಆಗಿ ಮೂವರು ಮಕ್ಕಳಿದ್ದರು.
ಪಶ್ಚಿಮ ದೇಶಗಳ ಸಾಂಸ್ಕೃತಿಕ ಪ್ರಭಾವದ ಕಾರಣದಿಂದಾಗಿ, ಮದುವೆ ಎನ್ನುವ ಆಚರಣೆಯು ಈ ಹಿಂದೆ ಜನರ ಮೇಲೆ ಹೊಂದಿದ್ದ ಪ್ರಭಾವವು ಈಗ ಉಳಿದಿಲ್ಲ. ಸಮಾಜವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಇದು ಗೋಚರಿಸುತ್ತದೆ.
ಆದರೆ, ಇಂತಹ ಸಂಬಂಧಗಳಲ್ಲಿ ಇರುವ ಮಹಿಳೆಯರನ್ನು ರಕ್ಷಿಸುವುದು ಬಹಳ ಮುಖ್ಯವಾಗುತ್ತದೆ. ಏಕೆಂದರೆ, ಲಿವ್- ಇನ್ ಸಂಬಂಧಗಳ ಸಂಗಾತಿಯಿಂದ ಹಿಂಸೆಗೆ ಗುರಿಯಾಗುವವರೂ ಮಹಿಳೆಯರೆ ಎಂದು ನ್ಯಾಯಪೀಠ ಹೇಳಿದೆ.