ನವದೆಹಲಿ: ಅಪ್ರಾಪ್ತ ವಯಸ್ಕ ಯುವಕ – ಯುವತಿ ನಡುವಿನ ಪ್ರೇಮ ಸಂಬಂಧವನ್ನು ಅತ್ಯಾಚಾರವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದಿರುವ ಸುಪ್ರೀಂ ಕೋರ್ಟ್, ಅಪ್ರಾಪ್ತರ ನಡುವೆ ಏರ್ಪಡುವ ಪ್ರೀತಿಯನ್ನು ಕ್ರಿಮಿನಲ್ ಕೃತ್ಯ ಎಂದು ಪರಿಗಣಿಸಬೇಕೇ ಎಂದು ಪ್ರಶ್ನಿಸಿದೆ.
ಪರಸ್ಪರ ಸಮ್ಮತಿಯ ಪ್ರೀತಿಗೆ ಇರುವ ವಯೋ ಮಿತಿಯನ್ನು 18 ರಿಂದ 16 ವರ್ಷಗಳಿಗೆ ಇಳಿಸುವ ಕುರಿತು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ| ಬಿ.ವಿ. ನಾಗರತ್ನಾ ಹಾಗೂ ನ್ಯಾ. ಆರ್. ಮಹಾದೇವನ್ ಅವರ ಪೀಠ, ಪೋಕೋ ಕಾಯ್ದೆಯ ದುರುಪಯೋಗದ ಕುರಿತು ಕಳವಳ ವ್ಯಕ್ತಪಡಿಸಿತು.
ಶಾಲಾ -ಕಾಲೇಜುಗಳಲ್ಲಿ ಒಟ್ಟಿಗೆ ಕಲಿಯುವಾಗ ಯುವಕ-ಯುವತಿಯರು ಪರಸ್ಪರ ಭಾವನೆ ಬೆಳೆಸಿಕೊಳ್ಳುತ್ತಾರೆ. ಆ ಪ್ರೀತಿಯನ್ನು ಅಪರಾಧ ಎಂದು ಹೇಳಲು ಬರುವುದಿಲ್ಲ. ಯುವಕ-ಯುವತಿಯರು ಒಬ್ಬರನ್ನೊಬ್ಬರು ಇಷ್ಟಪಟ್ಟು ಮದುವೆಯಾಗಲು ಬಯಸಿದರೆ, ಅಂತಹ ಪ್ರಕರಣಗಳನ್ನು ಅಪರಾಧದಂತೆ ಪರಿಗಣಿಸಬಾರದು ಎಂದು ನ್ಯಾಯಪೀಠ ಹೇಳಿದೆ.
ಹೆಣ್ಣಿನ ಪೋಷಕರು ತಮ್ಮ ಮಗಳು ಪ್ರೀತಿಸುತ್ತಿರುವ ಹುಡುಗನ ವಿರುದ್ಧ ಪೋಕೋ ಕಾಯ್ದೆಯಡಿ ದೂರು ದಾಖಲಿಸಿ, ಜೈಲಿಗೆ ಕಳುಹಿಸುವ ಘಟನೆಗಳು ನಡೆ ಯುತ್ತಿವೆ. ಕೆಲವೊಮ್ಮೆ ಮಕ್ಕಳು ಓಡಿ ಹೋಗಿ ಮದುವೆಯಾದರೆ ಅದನ್ನು ಮರೆಮಾಚಲು ಕೂಡ ಪೊಕ್ಸೋ ಅಡಿ ಪ್ರಕರಣ ದಾಖಲಿಸಲಾಗುತ್ತದೆ. ಇದನ್ನು ನ್ಯಾಯಾಲಯ ಕ್ರಿಮಿನಲ್ ಕೃತ್ಯ ಎಂದು ಪರಿಗಣಿಸಲು ಬರುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟವಾಗಿ ಹೇಳಿದೆ.