ಶಿವಮೊಗ್ಗ: ಆಶ್ರಯ ಬಡಾವಣೆ ಮನೆಯ ಖಾತೆ ಮಾಡಿಕೊಡಲು 10 ಸಾವಿರ ರೂ. ಲಂಚ ಕೇಳಿದ್ದ ಮಹಾನಗರ ಪಾಲಿಕೆ ಆಶ್ರಯ ವಿಭಾಗದ ಸಮುದಾಯ ಸಂಘಟನಾಧಿಕಾರಿ ಎ.ಪಿ.ಶಶಿಧರ್ ಎಂಬುವವರು ಶುಕ್ರವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಮೊಹ್ಮದ್ ಆಸೀಫ್ ಉಲ್ಲಾ ಅವರು ಅಮ್ಯಾದ್ ಅಲಿ ಅವರಿಂದ ಮನೆಯನ್ನು ಖರೀದಿಸಿದ್ದು, ತಮ್ಮ ಹೆಸರಿಗೆ ಖಾತೆ ಮಾಡಿಕೊಡುವಂತೆ ಪಾಲಿಕೆಗೆ ಅರ್ಜಿ ಸಲ್ಲಿಸಿದ್ದರು. ಈ ವಿಚಾರವಾಗಿ ಅಧಿಕಾರಿ ಎ.ಪಿ. ಶಶಿಧರ್ ಅವರನ್ನು ಭೇಟಿ ಮಾಡಿ ವಿಚಾರಿಸಿದಾಗ ₹10 ಸಾವಿರ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದರು. ಇದರ ಮೊಬೈಲ್ ಕಾಲ್ ರೆಕಾರ್ಡಿಂಗ್ ಮಾಡಿಕೊಂಡು ದೂರು ನೀಡಿದ್ದು, ಲೋಕಾಯುಕ್ತರು ಪ್ರಕರಣ ದಾಖಲಿಸಿಕೊಂಡಿದ್ದರು.
ನೆಹರು ರಸ್ತೆಯ ಆಶ್ರಯ ಕಚೇರಿಯಲ್ಲಿ ಅಧಿಕಾರಿಯು ಲಂಚದ ಹಣ ಪಡೆದಕೊಂಡ ಸಮಯದಲ್ಲಿ ದಾಳಿ ಮಾಡಿದ ಲೋಕಾಯುಕ್ತ ಪೊಲೀಸರು ಪಾಲಿಕೆ ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ.