ಸುದ್ದಿ

ಆತ ಮಾಡಿದ್ದು ಮಹಾ ಅಪರಾಧ; ಆ ಪಾಪಿ ಮಗನ ಹೆಣವೂ ನನಗೆ ಬೇಡ ಎನ್ನುವ ಮೂಲಕ ನ್ಯಾಯವೇ ದೊಡ್ಡದು ಎಂದ ತಾಯಿಗೆ ದೇಶಾದ್ಯಂತ ಮೆಚ್ಚುಗೆ

Share It

ಬರುಯಿಪುರ (ಪಶ್ಚಿಮ ಬಂಗಾಳ): ತಪ್ಪು ಮಾಡಿದವನು ಸ್ವಂತ ಮಗನೇ ಆದರೂ ಆತನ ಪಾಪದ ಪರ ನಿಲ್ಲದ ಈ ತಾಯಿಯ ಕಠಿಣ ನಿರ್ಧಾರ ನಿಜಕ್ಕೂ ಇಡೀ ಹೆಣ್ಣುಕುಲವೇ ಹೆಮ್ಮೆ ಪಡುವಂತದ್ದಾಗಿದೆ.

ಹೌದು, ಇಲ್ಲೊಬ್ಬಳು ತಾಯಿ ನ್ಯಾಯದ ಪರ ನಿಂತು ಪಾಪಿ ಮಗ ಮಾಡಿದ್ದು ಕ್ಷಮಿಸಲಾರದ ಮಹಾ ಅಪರಾಧ ಎಂದು ತಿಳಿದ ತಕ್ಷಣ, ಎನ್‌ಕೌಂಟರ್‌ನಲ್ಲಿ ಹತನಾದ ಆತನ ಶವವನ್ನು ಮುಟ್ಟಲೂ ನಿರಾಕರಿಸುವ ಮೂಲಕ ಇಡೀ ಸಮಾಜಕ್ಕೊಂದು ಮಹತ್ತರ ಸಂದೇಶ ನೀಡಿದ್ದಾರೆ.”

​ಮಾಧ್ಯಮಗಳ ಮುಂದೆ ಕಣ್ಣೀರಿನಲ್ಲೇ ಆಕ್ರೋಶ ಹೊರಹಾಕಿದ ತಾಯಿ!

​ಪಶ್ಚಿಮ ಬಂಗಾಳದ ಬರುಯಿಪುರದಲ್ಲಿ ನಡೆದ 12 ವರ್ಷದ ಬಾಲಕಿಯ ಮೇಲಿನ ಭೀಕರ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಮುಖ ಆರೋಪಿ ಪ್ರಭಾಶ್ ಮೊಂಡಲ್ ಪೊಲೀಸರ ಎನ್‌ಕೌಂಟರ್‌ನಲ್ಲಿ ಹತನಾಗಿದ್ದಾನೆ. ಈ ಸುದ್ದಿ ತಿಳಿಯುತ್ತಿದ್ದಂತೆ ಆತನ ಹೆತ್ತ ತಾಯಿ ಮಾಧ್ಯಮಗಳ ಮುಂದೆ ಆಡಿದ ಮಾತುಗಳು ಈಗ ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸಿವೆ.

​”ಅವನು ಮಾಡಿದ್ದು ಸಮಾಜ ತಲೆತಗ್ಗಿಸುವಂತಹ ಮಹಾ ಅಪರಾಧ. ಅದಕ್ಕೆ ತಕ್ಕ ಶಿಕ್ಷೆಯೇ ಅವನಿಗೆ ಸಿಕ್ಕಿದೆ. ಆತನ ಶವವನ್ನು ನಾನು ಸ್ವೀಕರಿಸುವುದಿಲ್ಲ, ನಮ್ಮ ಮನೆಗೆ ಆ ಪಾಪಿಯ ಹೆಣವನ್ನು ತರುವುದೂ ಇಲ್ಲ. ಅವನು ಯಾವುದೇ ಒಳ್ಳೆಯ ಕೆಲಸ ಮಾಡಿ ಸತ್ತಿಲ್ಲ. ತಪ್ಪು ಮಾಡಿದ್ದಾನೆ, ಶಿಕ್ಷೆ ಅನುಭವಿಸಿದ್ದಾನೆ. ಪೊಲೀಸರು ಆತನ ಶವವನ್ನು ಏನು ಬೇಕಾದರೂ ಮಾಡಿಕೊಳ್ಳಲಿ, ನನ್ನದೇನೂ ಆಕ್ಷೇಪವಿಲ್ಲ,” ಎಂದು ಕಣ್ಣೀರು ಹಾಕುತ್ತಲೇ ಆಕ್ರೋಶ ಹೊರಹಾಕಿದ್ದಾರೆ.

​ಸ್ಥಳ ಮಹಜರು ವೇಳೆ ಎನ್‌ಕೌಂಟರ್:

​ಬಾಲಕಿಯ ಕೊಲೆ ಪ್ರಕರಣದ ತನಿಖೆಯ ಭಾಗವಾಗಿ ಪೊಲೀಸರು ಆರೋಪಿ ಪ್ರಭಾಶ್ ಮೊಂಡಲ್‌ನನ್ನು ಅಪರಾಧ ನಡೆದ ಸ್ಥಳದ ಮರುಸೃಷ್ಟಿಗೆ  ಕರೆದೊಯ್ದಿದ್ದರು. ಈ ವೇಳೆ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಸಂಚು ರೂಪಿಸಿದ ಆರೋಪಿ, ಪೊಲೀಸರ ಬಂದೂಕನ್ನೇ ಕಸಿದುಕೊಂಡು ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಅಷ್ಟೇ ಅಲ್ಲದೆ, ಕರ್ತವ್ಯ ನಿರತ ಪೊಲೀಸರ ಮೇಲೆಯೇ ಗುಂಡು ಹಾರಿಸಿದ್ದಾನೆ. ಈ ಸಂದರ್ಭದಲ್ಲಿ ಪೊಲೀಸರು ಆತ್ಮರಕ್ಷಣೆಗಾಗಿ ನಡೆಸಿದ ಪ್ರತಿ ದಾಳಿಯಲ್ಲಿ ಆರೋಪಿ ಪ್ರಭಾಶ್ ಮೊಂಡಲ್‌ ಸ್ಥಳದಲ್ಲೇ ಹತನಾಗಿದ್ದಾನೆ.

​ಇಡೀ ರಾಜ್ಯವನ್ನೇ ನಡುಗಿಸಿದ್ದ ಭೀಕರ ಕೃತ್ಯ:

​ಕಳೆದ ಜುಲೈ 4 ರಂದು ನಾಪತ್ತೆಯಾಗಿದ್ದ 12 ವರ್ಷದ ಮುಗ್ಧ ಹೆಣ್ಣು ಮಗುವಿನ ಮೃತದೇಹವು ಮಾರನೇ ದಿನ ಚೀಲದಲ್ಲಿ ತುಂಬಿದ ಸ್ಥಿತಿಯಲ್ಲಿ ಕೆರೆಯೊಂದರಲ್ಲಿ ಪತ್ತೆಯಾಗಿತ್ತು. ಆ ಮುಗ್ಧ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಅತ್ಯಂತ ಕ್ರೂರವಾಗಿ ಕೊಲೆ ಮಾಡಲಾಗಿತ್ತು. ಈ ಘಟನೆ ಇಡೀ ಪಶ್ಚಿಮ ಬಂಗಾಳದಲ್ಲಿ ತೀವ್ರ ಆಕ್ರೋಶ ಹಾಗೂ ಪ್ರತಿಭಟನೆಗೆ ಕಾರಣವಾಗಿತ್ತು.

​ನೆಟ್ಟಿಗರ ಪ್ರಶಂಸೆಯ ಮಹಾಪೂರ:

​ಮಗಳನ್ನು ಕಳೆದುಕೊಂಡ ಕುಟುಂಬದ ಆಕ್ರೋಶ ಒಂದೆಡೆಯಾದರೆ, ಹೆತ್ತ ಮಗನೇ ಇಂತಹ ನೀಚ ಕೃತ್ಯ ಎಸಗಿದ್ದಕ್ಕೆ ಆತನ ಮುಖ ನೋಡಲು ನಿರಾಕರಿಸಿದ ಈ ತಾಯಿಯ ಧೈರ್ಯ ಮತ್ತು ನ್ಯಾಯಪ್ರಜ್ಞೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ.


Share It

You cannot copy content of this page