ಲಖನೌ: ಕೋಲ್ಕತ್ತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಡೆದ ಬೆನ್ನಲ್ಲೆ ಉತ್ತರಾಖಂಡದ ಉಧಮ್ ಸಿಂಗ್ ನಗರ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶದ ನರ್ಸ್ವೊಬ್ಬರನ್ನು ಅತ್ಯಾಚಾರವೆಸಗಿ ಕೊಲೆ ಮಾಡಿರುವ ಪೈಶಾಚಿಕ ಪ್ರಕರಣ ವರದಿಯಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಧರ್ಮೇಂದ್ರ ಕುಮಾರ್ ಎಂಬಾತನನ್ನು ಬಂಧಿಸಲಾಗಿದೆ.
ಉತ್ತರ ಪ್ರದೇಶದ ರಾಂಪುರ ಜಿಲ್ಲೆಯ ಹಳ್ಳಿಯವರಾದ ನರ್ಸ್, ಜುಲೈ 30ರಂದು ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದರು. ಈ ವೇಳೆ ಅವರನ್ನು ಅಡ್ಡಗಟ್ಟಿದ್ದ ಆರೋಪಿ ಧರ್ಮೇಂದ್ರ, ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ನರ್ಸ್ ನಾಪತ್ತೆಯಾಗಿರುವ ಬಗ್ಗೆ ಅವರ ಸಹೋದರಿ ಮರುದಿನ ಪ್ರಕರಣ ದಾಖಲಿಸಿದ್ದರು. ಇದೀಗ ಅವರ ಗ್ರಾಮದಲ್ಲೇ ನಸ್೯ ಶವ ಪತ್ತೆಯಾಗಿದೆ.