ಬೆಂಗಳೂರು: ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆಗೆ ಹೈಕೋರ್ಟ್ ಶುಕ್ರವಾರ ಗ್ರೀನ್ ಸಿಗ್ನಲ್ ತೋರಿದೆ. ಅಲ್ಲದೆ, ಬೈಕ್ ಟ್ಯಾಕ್ಸಿ ನಿಷೇಧಿಸಿದ್ದ ರಾಜ್ಯ ಸರಕಾರದ ಕ್ರಮವನ್ನು ಎತ್ತಿಹಿಡಿದಿದ್ದ ಏಕಸದಸ್ಯ ಪೀಠದ ಆದೇಶ ರದ್ದುಪಡಿಸಿರುವ ವಿಭಾಗೀಯ ಪೀಠ, ಬೈಕ್‌ಗಳನ್ನು ಟ್ಯಾಕ್ಸಿಗಳಾಗಿ ಬಳಸಲು ಅನುಮತಿ ನೀಡಿ ಆದೇಶಿಸಿದೆ.
ಮೋಟಾರು ವಾಹನ ಕಾಯಿದೆಯಡಿ ರಾಜ್ಯ ಸರಕಾರ ಸೂಕ್ತ ಮಾರ್ಗಸೂಚಿ ಮತ್ತು ನಿಯಮಗಳನ್ನು ರೂಪಿಸುವವರೆಗೆ ಬೈಕ್ ಟ್ಯಾಕ್ಸಿಗಳು ಕಾರ್ಯಾಚರಣೆ ನಡೆಸುವಂತಿಲ್ಲ. ಎಂಬ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಅಗ್ರಿಗೇಟರ್ ಸಂಸ್ಥೆಗಳಾದ ಓಲಾ, ಉಬರ್, ರಾಪಿಡೋ ಮತ್ತಿತರರು ಸಲ್ಲಿಸಿದ್ದ ಮೇಲ್ಮನವಿಗಳನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಬ್ರು, ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ವಿಭಾಗೀಯ ಪೀಠ ಪುರಸ್ಕರಿಸಿದೆ.
‘ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಮೋಟಾರು ವಾಹನ ಕಾಯಿದೆಯ ಸೆಕ್ಷನ್ 74(2)ರ ಪ್ರಕಾರ ಅಗತ್ಯವೆಂದು ಕಂಡುಬರುವ ಷರತ್ತುಗಳನ್ನು ವಿಧಿಸಬಹುದು. ಅಗ್ರಿಗೇಟರ್‌ಗಳು ಸಹ ಹೊಸದಾಗಿ ಅರ್ಜಿ ಸಲ್ಲಿಸಲು ಸ್ವತಂತ್ರರು,” ಎಂದು ಹೈಕೋರ್ಟ್ ತಿಳಿಸಿದೆ.
ದ್ವಿಚಕ್ರ ವಾಹನ ಮಾಲೀಕರು ತಮ್ಮ ವಾಹನಗಳನ್ನು ಸಾರಿಗೆ ವಾಹನ (ಟ್ರಾನ್ಸ್‌ಪೋರ್ಟ್ ವೆಹಿಕಲ್) ಎಂದು ನೋಂದಾಯಿಸಲು ಅರ್ಜಿ ಸಲ್ಲಿಸಲು ಮುಕ್ತರಾಗಿದ್ದಾರೆ. ಅಂತಹ ಅರ್ಜಿಗಳನ್ನು ಪರಿಗಣಿಸಿ, ವಾಹನ ಮಾಲೀಕರಿಗೆ ಸಾರಿಗೆ ವಾಹನವಾಗಿ ನೋಂದಣಿ ನೀಡಲು ಮತ್ತು ಕಾಂಟ್ರ್ಯಾಕ್ಟ್ ಕ್ಯಾರೇಜ್ ಆಗಿ ಕಾರ್ಯನಿರ್ವಹಿಸಲು ಅನುಮತಿ ನೀಡಬೇಕು ಎಂದು ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.