ಸುದ್ದಿ

ನಕಲಿ ನ್ಯಾಯಾಲಯ ಸೃಷ್ಟಿಸಿ ತೀರ್ಪು ನೀಡುತ್ತಿದ್ದ ನಕಲಿ ಜಡ್ಜ್ ಅರೆಸ್ಟ್!

Share It

ಅಹಮದಾಬಾದ್‌: ನ್ಯಾಯಾಧೀಶ ಎಂದು ಹೇಳಿಕೊಂಡು ನಕಲಿ ನ್ಯಾಯಾಲಯ ಸೃಷ್ಟಿಸಿಕೊಂಡು ಐದು ವರ್ಷಗಳಿಂದ ತೀರ್ಪು ನೀಡುತ್ತಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ.

ಮೊರಿಸ್‌ ಸ್ಯಾಮುವೆಲ್ ಕ್ರಿಸ್ತಿಯನ್ ಎಂಬಾತನೇ ಬಂಧಿನಾಗಿದ್ದು ಈತ ಗುಜರಾತ್‌ನ ಗಾಂಧಿನಗರ ಪ್ರದೇಶದಲ್ಲಿ 2019ರಿಂದಲೂ ಜಡ್ಜ್ ಎಂದು ಬಿಂಬಿಸಿಕೊಂಡು ಭೂ ವ್ಯಾಜ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ತೀರ್ಪು ನೀಡುತ್ತಿದ್ದ ಎಂದು ಗೊತ್ತಾಗಿದೆ.

ಇತ್ತೀಚೆಗೆ ಭೂವಿವಾದವೊಂದಕ್ಕೆ ಸಂಬಂಧಿಸಿದಂತೆ ತನ್ನ ಕಕ್ಷಿದಾರನನ್ನು ಸರ್ಕಾರದ ಅಧಿಕೃತ ಮಧ್ಯಸ್ಥಿಕೆದಾರ ಎಂದು ನೇಮಿಸಿ, ಕಕ್ಷಿದಾರನ ಹೆಸರನ್ನು ಸರ್ಕಾರಿ ಭೂಮಿಯ ದಾಖಲೆಯಲ್ಲಿ ಸೇರಿಸುವಂತೆ ಜಿಲ್ಲಾಧಿಕಾರಿಗೆ ಆದೇಶ ನೀಡಿದ್ದ. ಬಳಿಕ ಜಿಲ್ಲಾಧಿಕಾರಿ ಆದೇಶ ಪಾಲಿಸುವಂತೆ ಇನ್ನೊಬ್ಬ ವಕೀಲರ ಮೂಲಕ ಸಿಟಿ ಸಿವಿಲ್ ಕೋರ್ಟ್‌ಗೆ ಮನವಿ ಸಲ್ಲಿಸಿ, ತನ್ನ ನಕಲಿ ಆದೇಶವನ್ನು ಲಗತ್ತಿಸಿದ್ದ.

ಅದನ್ನು ಪರಿಶೀಲಿಸಿದ ಕೋರ್ಟ್ ರಿಜಿಸ್ಟ್ರಾರ್ ಹಾರ್ದಿಕ್ ದೇಸಾಯಿ ಅವರಿಗೆ ಅದು ನಕಲಿ ಆದೇಶ ಎಂದು ತಿಳಿದು ಪೊಲೀಸರಿಗೆ ದೂರು ನೀಡಿದ್ದರು. ನಂತರದ ತನಿಖೆಯಲ್ಲಿ ಮೊರಿಸ್‌ ಸ್ಯಾಮುವೆಲ್ ನಕಲಿ ಜಡ್ಜ್ ಎಂಬುದು ತಿಳಿದುಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. 2019ರಿಂದಲೂ ಹೀಗೆ ವಂಚಿಸುತ್ತಿದ್ದ ಮೊರಿಸ್ ಸ್ಯಾಮುವೆಲ್ ವಿರುದ್ಧ 2015ರಲ್ಲಿ ಮಣಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದೂ ಗೊತ್ತಾಗಿದೆ.


Share It

You cannot copy content of this page